ಪ್ರತ್ಯೇಕ ಪ್ರಕರಣ: ಮೂವರು ರೈತರು ಆತ್ಮಹತ್ಯೆ
ಮಂಡ್ಯ, ನ.30: ಜಿಲ್ಲೆಯಲ್ಲಿ ಸಾಲಬಾಧೆಯಿಂದ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದ್ದು, ಗುರುವಾರ ಮದ್ದೂರು ತಾಲೂಕಿನಲ್ಲಿ ಇಬ್ಬರು ಮತ್ತು ಪಾಂಡವಪುರ ತಾಲೂಕಿನಲ್ಲಿ ಓರ್ವ ರೈತ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮದ್ದೂರು ತಾಲೂಕಿನ ಗೆಜ್ಜಲಗೆರೆಯ ಜಿ.ಪಿ.ರಾಮಲಿಂಗಯ್ಯ(58), ಉಪ್ಪಾರದೊಡ್ಡಿ ಚಿಕ್ಕಣ್ಣ(70) ಹಾಗು ಪಾಂಡವಪುರ ತಾಲೂಕು ಚಿಕ್ಕಾಡೆಯ ಜವರೇಗೌಡ(38) ಆತ್ಮಹತ್ಯೆಗೆ ಶರಣಾದ ರೈತರು.
ಗೆಜ್ಜಲಗೆರೆ ಗ್ರಾಮದ ರೈತಸಂಘದ ಮುಖಂಡ ಜಿ.ಪಿ.ರಾಮಲಿಂಗಯ್ಯ(58)ಜಮೀನಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, 3 ಎಕರೆ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದರು.ಅಲ್ಲದೆ, ಕೃಷಿ ಚಟುವಟಿಗೆ ಬ್ಯಾಂಕ್ ಮತ್ತು ಖಾಸಗಿಯಾಗಿ ಸುಮಾರು 5 ಲಕ್ಷ ರೂ. ಸಾಲ ಪಡೆದಿದ್ದರು ಎನ್ನಲಾಗಿದ್ದು, ಬೆಳೆನಷ್ಟದ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ಪ್ರಮೀಳಾ ಮದ್ದೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಉಪ್ಪಾರದೊಡ್ಡಿ ಗ್ರಾಮದ ಚಿಕ್ಕಣ್ಣ(70) ಅವರಿಗೆ 1 ಎಕರೆ ಜಮೀನಿದ್ದು, 3.7 ಲಕ್ಷ ರೂ. ಸಾಲವಿತ್ತು ಎನ್ನಲಾಗಿದೆ. ಮನೆ ಹಿಂಭಾಗದ ಹಿತ್ತಲಿನಲ್ಲಿ ಇವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮದ್ದೂರು ಠಾಣೆಗೆ ದೂರು ನೀಡಲಾಗಿದೆ.
ಪಾಂಡವಪುರ ತಾಲೂಕಿನ ಚಿಕ್ಕಾಡೆಯ ಜವರೇಗೌಡ ಗುರುವಾರ ಬೆಳಗ್ಗೆ ಮನೆಯ ಶೌಚಾಲಯದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ 30 ಗುಂಟೆ ಜಮೀನು, 30 ಸಾವಿರ ರೂ. ಸಾಲವಿತ್ತು ಎನ್ನಲಾಗಿದೆ.







