ಎಂಟನೆ ತರಗತಿಯವರೆಗೆ ಕನ್ನಡ ಭಾಷೆ ಕಡ್ಡಾಯವಾಗಲಿ: ಪ್ರೊ.ಕೆ.ಎಸ್.ನಿಸಾರ್ ಅಹ್ಮದ್
ಬೆಳಗಾವಿ, ನ.30: ಕನ್ನಡ ಭಾಷೆ ಇನ್ನಷ್ಟು ಬಲಿಷ್ಠಗೊಳ್ಳಬೇಕಾದರೆ ಒಂದನೆ ತರಗತಿಯಿಂದ ಎಂಟನೆ ತರಗತಿಯವರೆಗೆ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ಹೇಳಿದ್ದಾರೆ.
ಗುರುವಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಭಾಗೃಹದಲ್ಲಿ ಕುಲಪತಿ, ಕಾರ್ಯಕಾರಿ ಪರಿಷತ್ ಹಾಗೂ ವಿದ್ಯಾ ವಿಧಾನ ಮಂಡಳ ಸದಸ್ಯರ ವತಿಯಿಂದ ಹಮ್ಮಿಕೊಂಡಿದ್ದ 67ನೆ ಕನ್ನಡ ರಾಜ್ಯೋತ್ಸವ ಹಾಗೂ 2017ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯನ್ನು ರಾಜ್ಯ ಸರಕಾರ ಕೈ ಬಿಟ್ಟಿಲ್ಲ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವು ಕನ್ನಡಪರ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ ಎಂದು ತಿಳಿಸಿದರು.
ಕೆಲವು ಹುದ್ದೆಗಳಿಗೆ ಇಂಗ್ಲಿಷ್ ಭಾಷೆಯು ಅನಿವಾರ್ಯವಾಗಿದೆ. ಇದರಿಂದ ಕನ್ನಡ ಭಾಷೆಯ ಜತೆಗೆ ಇತರ ಭಾಷೆಯನ್ನು ಕಲಿಯುವುದು ತಪ್ಪೇನಲ್ಲ. ಆದರೆ, ಮಾತೃ ಭಾಷೆ ಕನ್ನಡಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದವರು, ಕನ್ನಡ ಭಾಷೆ ಎರಡು ಸಾವಿರ ವರ್ಷಕಿಂತ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿದೆ. ಆದುದರಿಂದ, ಕನ್ನಡ ನಾಡಿನ ಮಕ್ಕಳು ಹೆಮ್ಮೆಯ ದೊರೆಗಳಾಗಿ ತಲೆ ತಗ್ಗಿಸದೆ ತಲೆ ಎತ್ತಿ ಬಾಳಬೇಕು ಎಂದರು.
ಕೆಲವು ಸಂದರ್ಭಗಳಲ್ಲಿ ಕೆಲವರು ಅನವಶ್ಯಕವಾಗಿ ಬೇರೆ ಭಾಷೆಯನ್ನು ಬಳಸುತ್ತಾರೆ. ಇಂತಹ ಪ್ರವೃತ್ತಿಯಿಂದಾಗಿ ಕನ್ನಡ ಭಾಷೆಗೆ ಧಕ್ಕೆ ಉಂಟಾಗುತ್ತಿದೆ. ಅತೀ ಅವಶ್ಯಕತೆ ಇದ್ದಾಗ ಮಾತ್ರ ಇತರ ಭಾಷೆಯನ್ನು ಬಳಸಬೇಕೆಂದು ಸಲಹೆ ನೀಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನವು ಅತೀ ವೇಗವಾಗಿ ಮತ್ತು ಹೆಚ್ಚು ಉಪಯುಕ್ತವಾಗಿ ಬೆಳೆದಿದೆ. ಅದರ ಸದುಪಯೋಗವನ್ನು ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ನುಡಿದರು.
ನಾಗನೂರು ರುದ್ರಾಕ್ಷಿ ಮಠದ ಶ್ರೀ ಸಿದ್ಧರಾಮ ಮಹಾಸ್ವಾಮಿ ಮಾತನಾಡಿ, ಕುಂದಾನಗರಕ್ಕೆ ಮೂರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿದ್ದು, ಗಡಿಭಾಗದ ಕನ್ನಡಕ್ಕೆ ಮತ್ತಷ್ಟು ಶಕ್ತಿ ನೀಡಿದಂತಾಗಿದೆ. ಮುಂಬರುವ ದಿನಗಳಲ್ಲಿ ತಾಂತ್ರಿಕ ಶಿಕ್ಷಣ ಪಠ್ಯವು ಕನ್ನಡ ಭಾಷೆಯಲ್ಲಿ ಮುದ್ರಣವಾಗಲಿ. ಇದರಿಂದ ಕನ್ನಡ ನಾಡು, ನುಡಿ, ನೆಲ-ಜಲದ ಬಗ್ಗೆ ಅಪಾರ ಜ್ಞಾನ ಸಂಪಾದಿಸಲು ಸಹಕಾರವಾಗುತ್ತದೆ ಎಂದು ಹೇಳಿದರು.
ರಾಮಾಯಣ ಮತ್ತು ಮಹಾಭಾರತದಲ್ಲಿ ಕನ್ನಡ ಪದಗಳು ಇರುವುದು ಕನ್ನಡಿಗರ ಹೆಮ್ಮೆ. ಕೃಷ್ಣ ದೇವರಾಯ ಮತ್ತು ಎರಡನೇಯ ಪುಲಕೇಶಿ ಸೇರಿದಂತೆ ಇತರ ರಾಜರು ಕನ್ನಡ ಭಾಷೆಯನ್ನು ಬೆಳೆಸಿದ್ದಾರೆ. ಅನ್ಯ ಭಾಷೆಯ ಪ್ರಭಾವದಿಂದ ಕನ್ನಡ ಭಾಷೆಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಕಾಪಾಡಿ, ಗಡಿಭಾಗದಲ್ಲಿ ಕನ್ನಡ ಭಾಷೆಯನ್ನು ಗಟ್ಟಿಗೊಳಿಸಬೇಕು ಎಂದು ಅವರು ಕರೆ ನೀಡಿದರು.
ಇದಕ್ಕೂ ಮುನ್ನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ನಾಗನೂರು ರುದ್ರಾಕ್ಷಿ ಮಠದ ಶ್ರೀ ಸಿದ್ಧರಾಮ ಮಹಾಸ್ವಾಮಿ, ಅಭಿಯಂತ ಬಿ.ಎ.ರೆಡ್ಡಿ, ಹಿಂದೂಸ್ಥಾನಿ ಸಂಗೀತಗಾರ ಪಂ.ರಾಜಪ್ರಭು ಧೋತ್ರೆಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕರಿಸಿದ್ದಪ್ಪ, ಕುಲಸಚಿವ ಡಾ.ಎಚ್.ಎನ್.ಜಗನ್ನಾಥ ರೆಡ್ಡಿ, ಮೌಲ್ಯಮಾಪನಾ ಕುಲಸಚಿವ ಡಾ.ಸತೀಶ ಅಣ್ಣಿಗೇರಿ, ಹಣಕಾಸು ಅಧಿಕಾರಿ ಎಂ.ಎ.ಸಪ್ನಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







