ಎಲ್ಲರೂ ಉದಾತ್ತ ಮನಸ್ಸಿನಿಂದ ನಡೆದುಕೊಳ್ಳಿ: ಹೈಕೋರ್ಟ್ ಅಭಿಪ್ರಾಯ
ರವಿ ಬೆಳಗೆರೆ, ಅನಿಲ್ ರಾಜ್ ವಿರುದ್ಧದ ಶಿಕ್ಷೆ ವಿಚಾರ

ಬೆಂಗಳೂರು, ನ.29: ಶಾಸಕರ ವಿರುದ್ಧ ಮಾನಹಾನಿ ವರದಿ ಪ್ರಕಟಿಸಿದ್ದ ಆರೋಪದ ಮೇಲೆ ಪತ್ರಕರ್ತರಾದ ರವಿ ಬೆಳಗೆರೆ ಮತ್ತು ಅನಿಲ್ ರಾಜ್‌ಗೆ ಜೈಲು ಶಿಕ್ಷೆ ವಿಧಿಸಿರುವ ವಿಚಾರದಲ್ಲಿ ವಿಧಾನಸಭೆ ಸ್ಪೀಕರ್ ಹಾಗೂ ಶಾಸಕರು ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರೂ ಉದಾತ್ತ ಮನಸ್ಸಿನಿಂದ ನಡೆದುಕೊಳ್ಳಬೇಕಿದೆ ಎಂದು ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.
ಪ್ರಕರಣದಲ್ಲಿ ತಮಗೆ ವಿಧಾನಸಭೆ ಸ್ಪೀಕರ್ ವಿಧಿಸಿದ್ದ ಒಂದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ.ದಂಡವನ್ನು ರದ್ದುಪಡಿಸುವಂತೆ ಕೋರಿ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ನ್ಯಾಯಪೀಠ ಹೀಗೆ ಸಲಹೆ ಮಾಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ವಿಧಾನಸಭೆ ಸ್ಪೀಕರ್ ಹಾಗೂ ವಿಧಾನಸಭೆ ಹಕ್ಕು ಬಾಧ್ಯತೆಗಳ ಸಮಿತಿ ಮುಖ್ಯಸ್ಥರು ಅರ್ಜಿದಾರರಿಗೆ ಜೈಲು ಶಿಕ್ಷೆ ವಿಧಿಸಿರುವುದು ಸಂವಿಧಾನ ಬಾಹಿರವಾಗಿದೆ. ಇದರಿಂದ ಸದ್ಯ ಅವರಿಗೆ ಬಂಧನ ಭೀತಿಯಿದೆ. ಹೀಗಾಗಿ, ಶಿಕ್ಷೆ ವಿಧಿಸಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಪ್ರಕರಣವು ನ್ಯಾಯಾಲಯಕ್ಕೆ ಬಂದಿದೆ. ವಿಧಾನಸಭೆ ಹಕ್ಕು ಬಾಧ್ಯತೆಗಳ ಸಮಿತಿ ಹಾಗೂ ವಿಧಾನಸಭೆ ಸ್ಪೀಕರ್ ಅವರು ಅರ್ಜಿದಾರರಿಗೆ ಶಿಕ್ಷೆ ವಿಧಿಸಿರುವ ಹಿನ್ನೆಲೆಯಲ್ಲಿ ಆ ಕುರಿತು ಸಂವಿಧಾನದ ಅವಕಾಶಗಳನ್ನು ನ್ಯಾಯಾಲಯವು ಸಮಗ್ರವಾಗಿ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದರು.
ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಪೀಠವು ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ಪ್ರತಿವಾದಿಗಳಾದ ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ, ವಿಧಾನಸಭೆ ಹಕ್ಕು ಭಾಧ್ಯತೆಗಳ ಸಮಿತಿ ಮುಖ್ಯಸ್ಥರು, ಶಾಸಕರಾದ ಬಿ.ಎನ್.ನಾಗರಾಜ್ ಮತ್ತು ಎಸ್.ಆರ್.ವಿಶ್ವನಾಥ್ ಅವರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಡಿ.6ಕ್ಕೆ ಮುಂದೂಡಿತು.







