ಸಾರಿಗೆ ನೌಕರರು ಕನ್ನಡದ ಕಟ್ಟಾಳುಗಳು: ರೇವಣ್ಣ
ಬೆಂಗಳೂರು, ನ.30: ಸರಕಾರಿ ಸಾರಿಗೆ ಸಂಸ್ಥೆಗಳ ಚಾಲಕರು ಮತ್ತು ನಿರ್ವಾಹಕರು ಕನ್ನಡದ ನಿಜವಾದ ಕಟ್ಟಾಳುಗಳು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ(ಬಿಎಂಟಿಸಿ) ಕನ್ನಡ ಕ್ರಿಯಾ ಸಮಿತಿಯು ಶಾಂತಿನಗರದ ಟಿಟಿಎಂಸಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ‘62ನೆ ಕರ್ನಾಟಕ ರಾಜ್ಯೋತ್ಸವ ಸಮಾರಂಭ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾರಿಗೆ ಸಂಸ್ಥೆಗಳು ಅತ್ಯುತ್ತಮ ಸೇವೆ ನೀಡವಲ್ಲಿ ನೌಕರರ ಶ್ರಮವಿದೆ. ಅವರು ಪ್ರಯಾಣಿಕರೊಂದಿಗೆ ಕನ್ನಡದಲ್ಲೆ ವ್ಯವಹರಿಸುವುದರಿಂದ ನಗರದಲ್ಲಿ ಇನ್ನೂ ಕನ್ನಡದ ವಾತಾವರಣ ಇದೆ. ಅವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಇಲಾಖೆ ಸಿದ್ಧವಿದೆ ಎಂದು ತಿಳಿಸಿದರು.
ಇಂದು ಕೇಂದ್ರದಲ್ಲಿ 3 ವರ್ಷ ಆಡಳಿತ ನಡೆಸಿದವರು ಅಭಿವೃದ್ಧಿ ಮಾಡಿದ್ದೇವೆ ಎಂದು ಬೀಗುತ್ತಿದ್ದಾರೆ. ದೇಶ ಇಂದು ಅಭಿವೃದ್ಧಿಯ ಗತಿಯಲ್ಲಿ ಇರಲು ಪಂಚವಾರ್ಷಿಕ ಯೋಜನೆಗಳು ಕಾರಣ ಎಂದು ಹೇಳಿದರು.
ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷ ವ.ಚ.ಚನ್ನೇಗೌಡ ಮಾತನಾಡುತ್ತ, ಬಿಎಂಟಿಸಿಗೆ ಸಾವಿರಾರು ಕೋಟಿ ರೂ. ಆಸ್ತಿಯಿದೆ. ಅದರಲ್ಲಿ ಕನ್ನಡಪರ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಕನ್ನಡ ಭವನ ನಿರ್ಮಿಸಬೇಕು. ಟಿಟಿಎಂಸಿಗಳಲ್ಲಿನ ಸ್ಥಳಾವಕಾಶವನ್ನು ಸದುಪಯೋಗ ಪಡಿಸಿೊಳ್ಳಬೇಕು ಎಂದು ಒತ್ತಾಯಿಸಿದರು.
ನೌಕರರೊಂದಿಗೆ ಚರ್ಚಿಸದೆ ಸಂಸ್ಥೆಯ ಯೋಜನೆಗಳನ್ನು ಎ.ಸಿ.ರೂಮ್‌ಗಳಲ್ಲಿ ಕೂರುವ ಅಧಿಕಾರಿಗಳು ರೂಪಿಸುತ್ತಾರೆ. ಇದರಿಂದಾಗಿ ಬಿಎಂಟಿಸಿ ಸಂಸ್ಥೆ ನಷ್ಟದಲ್ಲಿದೆ. ಐದಾರು ನೂರು ಕೋಟಿ ರೂ. ವೆಚ್ಚ ಮಾಡಿ ಕಟ್ಟಿದ ಟಿಟಿಎಂಸಿಗಳು ಖಾಲಿಯಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾರ್ಯಕ್ರಮ ಆಯೋಜಿಸಲು ಮತ್ತು ಸಿಬ್ಬಂದಿಗೆ ತರಬೇತಿ ನೀಡಲು ಅನುವಾಗುವಂತ ಕನ್ನಡ ಭವನ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದರು.
ಬಿಎಂಟಿಸಿ ಅಧ್ಯಕ್ಷ ಎಂ.ನಾಗರಾಜ್ ಯಾದವ್, ನಗರದಲ್ಲಿ ಹಲವು ಕ್ಯಾಬ್ ಸೇವೆಗಳು, ಮೆಟ್ರೊ ಸಾರಿಗೆ ಇದ್ದರೂ, ನಮ್ಮ ಸಂಸ್ಥೆಯ ಬಸ್‌ಗಳು ಪ್ರತಿದಿನ 5 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ. ನಮ್ಮ ಉತ್ತಮ ಸೇವೆಗೆ 106 ಪ್ರಶಸ್ತಿಗಳು ಬಂದಿವೆ ಎಂದರು.
ನೌಕರರ ಕ್ಷೇಮ ಕಾಪಾಡಲು ಯಶವಂತಪುರದಲ್ಲಿ ಆಸ್ಪತ್ರೆ ಸ್ಥಾಪಿಸುತ್ತೇವೆ. ಮುಂದಿನ ದಿನಗಳಲ್ಲಿ ಕನ್ನಡ ಸಪ್ತಾಹಗಳನ್ನು ಆಯೋಜಿಸಿ ಪ್ರಯಾಣಿಕರಿಗೆ ಕನ್ನಡ ಪತ್ರಿಕೆ, ಪುಸ್ತಕಗಳನ್ನು ವಿತರಿಸುತ್ತೇವೆ ಎಂದು ತಿಳಿಸಿದರು.
ಲೇಖಕಿ ಡಾ.ವಿಜಯಾ ಮಾತನಾಡಿ, ರಾಜ್ಯದಲ್ಲಿನ ದುಡಿಯುವ ವರ್ಗಕ್ಕೆ ಆದ್ಯತೆ ನೀಡಿದಾಗ ಕನ್ನಡ ಬೆಳೆಯುತ್ತದೆ. ನಾಡು, ನುಡಿಯ ಹೋರಾಟಗಳಲ್ಲಿ ಸಾರಿಗೆ ಕಾರ್ಮಿಕರು ಸದಾ ಮುಂದಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಎಸೆಸೆಲ್ಸಿ, ಪಿಯುಸಿ ಮತ್ತು ಪದವಿ ಕೋರ್ಸ್‌ಗಳಲ್ಲಿ ಹೆಚ್ಚು ಅಂಕ ಗಳಿಸಿದ ಚಾಲಕರ ಮತ್ತು ನಿರ್ವಾಹಕರ ಮಕ್ಕಳಿಗೆ ‘ವಿದ್ಯಾಶ್ರೀ’ ಪ್ರಶಸ್ತಿ ಹಾಗೂ ಸಾಹಿತಿಗಳಾದ ಕೆ.ವೈ.ನಾರಾಯಣಸ್ವಾಮಿ ಮತ್ತು ಎಂ.ಎಸ್.ಆಶಾದೇವಿ ಅವರಿಗೆ ‘ಸಾಹಿತ್ಯ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.







