ಹಳ್ಳಿಯ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಬೇಕು: ಎಸ್.ಜಿ.ಸಿದ್ದರಾಮಯ್ಯ
ಬೆಂಗಳೂರು, ನ.30: ಹಳ್ಳಿಗಳಲ್ಲಿರುವ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವುದು ನಿಜವಾದ ಶ್ರೇಷ್ಠ ಕೆಲಸವೇ ಹೊರತು, ನಗರದಲ್ಲಿರುವ ಸಾಹಿತಿಗಳಿಗೆ ಪ್ರಶಸ್ತಿ ನೀಡುವುದಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕಸಾಪದಲ್ಲಿ ಡಾ.ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾರಿಗೂ ಕಾಣದಂತಹ ಗ್ರಾಮೀಣ ಪ್ರತಿಭೆಗಳು ನೂರಾರಿದ್ದರೂ, ನಗರ ಪ್ರದೇಶದಲ್ಲಿರುವವರಿಗೆ ನಾವು ಹೆಚ್ಚಿನ ಮಾನ್ಯತೆ ನೀಡುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಭಾಷೆ ಇಂದು ಮರೆಯ ಅಂಚಿನಲ್ಲಿದೆ. ಭಾಷೆ ಸತ್ತರೆ ಈ ನೆಲದ ಜನರ ಬದುಕು ಕೂಡ ಸಾಯುತ್ತದೆ. ನಾವೆಲ್ಲರೂ ಅನ್ಯ ಭಾಷೆಯ ಅಡಿಯಲ್ಲಿ ಬದುಕುವ ಸ್ಥಿತಿ ಏರ್ಪಡುತ್ತದೆ ಎಂದ ಅವರು, ಬೇಲಿ ಎದ್ದು ಹೊಲ ಮೇಯುವ ಹಾಗೆ ಕನ್ನಡಿಗರೇ ಕನ್ನಡ ಭಾಷೆಯನ್ನು ಕೀಳರಿಮೆಯಿಂದ ಕಾಣುತ್ತಿರುವುದು ಸರಿಯಲ್ಲ. ಕನ್ನಡಕ್ಕೆ ಹೊಸತನವನ್ನು ನೀಡುವ ಶಕ್ತಿ ಇಂದಿನ ಯುವಕರಲ್ಲಿದೆ. ಅದನ್ನು ಬೆಳೆಸುವ ಜವಾಬ್ದಾರಿಯನ್ನು ಹೊತ್ತು ನಿಲ್ಲಬೇಕು ಎಂದು ಹೇಳಿದರು.
ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಾಣೆಯಾಗುತ್ತಿದೆ. ಶಿಕ್ಷಕರಿಂದ ಕನ್ನಡ ಭಾಷೆ ಮರೆಯಾಗುತ್ತಿದ್ದು, ಮುಂದೊಂದು ದಿನ ಕನ್ನಡ ಭಾಷೆ ಶಿಕ್ಷಕರಿಂದಲೇ ವಿನಾಶವಾಗಲಿದೆ. ಅಧಿಕಾರದಲ್ಲಿರುವಂತಹವರು ಮೊದಲು ಆತ್ಮ ವಿಮರ್ಶೆ ಮಾಡಿಕೊಂಡು ಕನ್ನಡವನ್ನು ಉಳಿಸಲು ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕನ್ನಡಿಗರು ಹೋರಾಟ ನಡೆಸಿ ಕನ್ನಡ ಭಾಷೆಯನ್ನು ಉಳಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಕನ್ನಡ ಭಾಷೆಯ ಮೇಲೆ ಕೀಳು ಮನೋಭಾವ ಬೆಳೆದು ಮೂರನೇ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರಶಸ್ತಿ ಬಿ.ಆರ್.ಸತ್ಯನಾರಾಯಣ (ಸಮಾಜ ಸೇವೆ), ಟಿ.ತಿಮ್ಮೇಶ್ (ಕನ್ನಡ ಪರ ಚಳವಳಿ), ಬಿ.ಎಂ.ಭಾರತಿ (ಸಾಹಿತ್ಯ), ಟಿ.ಲೋಕೇಶ್ (ಶಿಕ್ಷಕ) ಇವರುಗಳಿಗೆ ಡಾ.ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಪ್ರತಿಷ್ಠಾನದ ಅಧ್ಯಕ್ಷ ಡಾ.ಕಾಂತರಾಜಪುರ ಸುರೇಶ್, ಖಜಾಂಚಿ ಪಿ.ಮಲ್ಲಿಕಾರ್ಜುನ ಸೇರಿದಂತೆ ಹಲವರು ಉಪಸ್ಥಿತರಿದ್ದರು.







