ಕಾನೂನು ತಜ್ಞರ ಅಭಿಪ್ರಾಯ ಪಡೆದು ಕ್ರಮ: ಸಚಿವ ಜಯಚಂದ್ರ
ನೈಸ್ ಸಂಸ್ಥೆ ಅಕ್ರಮ
ಬೆಂಗಳೂರು, ನ. 30: ಬೆಂಗಳೂರು ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆ ಸಂಬಂಧ ‘ನೈಸ್ ಸಂಸ್ಥೆ’ ಮೂಲ ಒಪ್ಪಂದ ಉಲ್ಲಂಘನೆ ಸಂಬಂಧ ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್‌ಗಳಲ್ಲಿ ಹಲವು ಪ್ರಕರಣಗಳಿದ್ದು, ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೈಸ್ ಸಂಸ್ಥೆ ರಾಜ್ಯ ಸರಕಾರದ ವಿರುದ್ಧ ಹೈಕೋರ್ಟಿನಲ್ಲಿ 34 ಮತ್ತು ಸುಪ್ರೀಂ ಕೋರ್ಟಿನಲ್ಲಿ 20 ಸೇರಿದಂತೆ ಒಟ್ಟು 54 ಪ್ರಕರಣಗಳಿವೆ. ಈ ಬಗ್ಗೆ ವಿಶೇಷ ಕಾನೂನು ತಂಡವನ್ನು ರಚನೆ ಮಾಡಲಾಗಿದೆ ಎಂದು ಹೇಳಿದರು.
ನೈಸ್ ಸಂಸ್ಥೆ ಅಕ್ರಮಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ವರದಿ ಮಂಡನೆಯಾಗಿದ್ದು ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆಯೂ ನಡೆದಿದೆ. ನೈಸ್ ರಸ್ತೆ ವಶಪಡಿಸಿಕೊಳ್ಳುವ ಸಂಬಂಧವೂ ರಾಜ್ಯ ಸರಕಾರ ಯಾವುದೇ ಸಂದರ್ಭದಲ್ಲಿಯೂ ಹಿಂಜರಿಯದು ಎಂದ ಅವರು, ಈ ಸಂಬಂಧ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ನೈಸ್ ರಸ್ತೆ ಮೂಲ ಒಪ್ಪಂದದನ್ವಯ ರಸ್ತೆ ಮತ್ತು ಉಪನಗರ ನಿರ್ಮಾಣಕ್ಕೆ 20,193 ಎಕರೆ ನೈಸ್ ಸಂಸ್ಥೆ ವಶಪಡಿಸಿಕೊಳ್ಳಬೇಕಿತ್ತು. ಆದರೆ, 32ಸಾವಿರ ಎಕರೆ ಭೂಮಿಯನ್ನು ವಶಪಡಿಸಿಕೊಂಡಿದೆ. ಹೆಚ್ಚುವರಿ ಭೂಮಿಯನ್ನು ರೈತರಿಗೆ ಹಿಂದಿರುಗಿಸಬೇಕು ಎಂದು ಸದನ ಸಮಿತಿ ಶಿಫಾರಸು ಮಾಡಿದೆ. ನೈಸ್ ಸಂಸ್ಥೆ ಸಂಬಂಧ ಇನ್ನೊಂದು ವಾರ ಅಥವಾ ಹತ್ತು ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಮರಳಿನ ಕೊರತೆ ತಪ್ಪಿಸಲು 2018ರ ಜನವರಿಗೆ ಎಂಎಸ್‌ಐಎಲ್ ಮೂಲಕ ವಿದೇಶದಿಂದ ಮರಳು ಆಮದಿಗೆ ನಿರ್ಧರಿಸಿದ್ದೇವೆ. ಕಟ್ಟಡಗಳ ನಿರ್ಮಾಣಕ್ಕೆ ಈ ಯೋಜನೆ ಬಳಕೆಯಾಗಲಿದೆ. ರಾಜ್ಯ ಸರಕಾರದಿಂದಲೇ ಮರಳು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.







