ವಿದ್ಯುತ್ ಬೇಲಿಯಿಂದ ಕಾಡು ಕೋಣಗಳ ಸಾವು: ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ
ಶಿವಮೊಗ್ಗ, ನ.30: ಜಮೀನಿಗೆ ಅಳವಡಿಸಿದ್ದ ವಿದ್ಯುತ್ ತಂತಿ ಬೇಲಿಯಿಂದ ಮೂರು ಕಾಡು ಕೋಣಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರಿಗೆ ಜಿಲ್ಲೆಯ ಭದ್ರಾವತಿ 3ನೆ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಕೆ. ಸಂದೇಶ್ 3 ವರ್ಷ ಸಾದಾ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಭದ್ರಾವತಿ ತಾಲೂಕು ದೊಡ್ಡೇರಿ ಗ್ರಾಮದ ನಿವಾಸಿಗಳಾದ ಮಲ್ಲೇಶಪ್ಪ, ಗಣೇಶ್, ಮಣಿ ಹಾಗೂ ತಮ್ಮಯ್ಯ ಶಿಕ್ಷೆಗೊಳಗಾದವರಾಗಿದ್ದಾರೆ. ಇದರಲ್ಲಿ ತಮ್ಮಯ್ಯ ಮರಣ ಹೊಂದಿದ್ದಾರೆ. ಸರಕಾರಿ ಅಭಿಯೋಜಕ ಎಚ್.ಆರ್.ಶ್ರೀಧರ್ ವಾದ ಮಂಡಿಸಿದ್ದರು.
ಭದ್ರಾವತಿ ಅರಣ್ಯ ವಲಯದ ಗಂಗೂರು ಶಾಖೆಯ ದೊಡ್ಡೇರಿ ಗ್ರಾಮದ ಸರ್ವೇ ನಂ.29ರಲ್ಲಿ ಮಲ್ಲೇಶಪ್ಪಎಂಬವರಿಗೆ ಸೇರಿದ ಜಮೀನಿದೆ. ಜಾನುವಾರು, ಕಾಡು ಪ್ರಾಣಿಗಳು ಪ್ರವೇಶಿಸದಂತೆ ಜಮೀನಿನ ಸುತ್ತ ಅನಧಿಕೃತವಾಗಿ ಅವರು ವಿದ್ಯುತ್ ತಂತಿ ಬೇಲಿ ಹಾಕಿದ್ದರು. 2013ರ ಸೆ.19ರಂದು ರಾತ್ರಿ ಮೇವು ಹರಸಿ ಬಂದ ಮೂರು ಕಾಡು ಕೋಣಗಳಿಗೆ ವಿದ್ಯುತ್ ತಂತಿ ಬೇಲಿಯಿಂದ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದವು.
ಮಲ್ಲೇಶಪ್ಪಅವರು ಗಣೇಶ್, ಮಣಿ ಹಾಗೂ ತಮ್ಮಯ್ಯ ಅವರ ಜೊತೆ ಸೇರಿಕೊಂಡು ಜಮೀನಿನ ಬಳಿಯೇ ಕಾಡು ಕೋಣಗಳನ್ನು ಮುಚ್ಚಿ ಹಾಕಲು ಯತ್ನಿಸಿದ್ದರು. ಈ ವಿಷಯ ತಿಳಿದು ಭದ್ರಾವತಿ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದರು.
ಈ ಸಂಬಂಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಕೂಡ ಸಲ್ಲಿಸಿದ್ದರು. ಆಪಾದಿತರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ.







