ರಾಷ್ಟ್ರೀಯ ಪಕ್ಷಗಳು ರೈತರ ಜ್ವಲಂತ ಸಮಸ್ಯೆ ಮರೆತಿವೆ: ಪ್ರಜ್ವಲ್ ರೇವಣ್ಣ

ಮದ್ದೂರು, ನ.30: ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ವಿಫಲವಾಗಿವೆ ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಆರೋಪಿಸಿದ್ದಾರೆ.
ಪಟ್ಟಣದ ಹಳೇ ಬಸ್‌ನಿಲ್ದಾಣದ ಆವರಣದಲ್ಲಿ ಗುರುವಾರ ಸಂಜೆ ‘ಯುವಕರ ನಡಿಗೆ ಕುಮಾರಣ್ಣನ ಕಡೆಗೆ’ ಯುವ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೈತರ ಸಮಸ್ಯೆ ನಿವಾರಣೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪ್ರಾದೇಶಿಕ ಪಕ್ಷ ಹಗಲಿರುಳು ಶ್ರಮಿಸುತ್ತಿದ್ದು, ಪಕ್ಷದ ಬೆಂಬಲಕ್ಕೆ ರಾಜ್ಯ ಜನರು ನಿಲ್ಲುವರೆಂಬ ವಿಶ್ವಾಸ ನನಗಿದೆ ಎಂದರು.
ನಮ್ಮ ಕುಟುಂಬದಲ್ಲಿ ಯಾವುದೇ ಒಡಕಿಲ್ಲ. ಇದು ವಿರೋಧಿಗಳ ಊಹಾಪೋಹಾವಷ್ಟೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿಸುವುದಕ್ಕೆ ನಮ್ಮ ಕುಟುಂಬದ ಸಹಮತವಿದೆ. ಕಾರ್ಯಕರ್ತರು ಈ ಬಗ್ಗೆ ಗೊಂದಲಗೊಳ್ಳುವುದು ಬೇಡ ಎಂದು ರೇವಣ್ಣ ಮನವಿ ಮಾಡಿದರು.
ಬೆನ್ನಿಗೆ ಚೂರಿ ಹಾಕಿದರು: ನಾಗಮಂಗಲದಲ್ಲಿ ನಮ್ಮಿಂದ ಅಧಿಕಾರವನ್ನು ಉಂಡು ಬೆಳೆದವರು ಬೆನ್ನಿಗೆ ಚೂರಿ ಹಾಕಿ ಹೋದರು. ಆದರೆ, ಅಪ್ಪಾಜಿಗೌಡ, ಶ್ರೀಕಂಠೇಗೌಡರು ಸಂಕಷ್ಟದ ಸಂದರ್ಭದಲ್ಲಿ ದೇವೇಗೌಡರಿಗೆ ಬೆನ್ನಲುಬಾಗಿ ನಿಂತಿದದ್ದನ್ನು ಎಂದಿಗೂ ಮರೆಯುವುದಿಲ್ಲ. ಈಗ ಸುರೇಶಗೌಡ ಹಾಗೂ ಎಲ್.ಆರ್.ಶಿವರಾಮೇಗೌಡ ಅವರ ಆಗಮನದಿಂದಾಗಿ ನಾಗಮಂಗಲದಲ್ಲಿ ಜೆಡಿಎಸ್ ಪಕ್ಷ ಇನ್ನಷ್ಟು ಶಕ್ತಿಶಾಲಿಯಾಗಿದೆ ಎಂದು ಪ್ರಜ್ವಲ್ ಹೇಳಿದರು.
ಸಮಾವೇಶ ಉದ್ಘಾಟಿಸಿದ ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ರೈತರ ಸಮಸ್ಯೆಗಳ ನಿವಾರಣೆಗೆ ಪ್ರಾದೇಶಿಕ ಪಕ್ಷದ ಅಗತ್ಯ ಮನಗಂಡಿರುವ ಜನರು ಜೆಡಿಎಸ್ ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾದೇಗೌಡರ ಪರೋಕ್ಷ ಟೀಕೆ:ಮಂಡ್ಯ ರಸ್ತೆಯಲ್ಲಿ ಕುಳಿತು ಧರಣಿ ಮಾಡಿದವರು ಕಾವೇರಿ ವಿಷಯದಲ್ಲಿ ಮಾಡಿದ ಸಾಧನೆ ಶೂನ್ಯ ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ.ಮಾದೇಗೌಡರನ್ನು ಪರೋಕ್ಷವಾಗಿ ಟೀಕಿಸಿದರು.
ಮಾಜಿ ಪ್ರಧಾನಿ ದೇವೇಗೌಡರು ರಿಟ್ ಅರ್ಜಿ ಸಲ್ಲಿಸಿ ಕಾವೇರಿ ವಿಷಯ ಜೀವಂತ ಉಳಿಸಿದರು. ದೇವೇಗೌಡರು ಕಾವೇರಿ ವಿಚಾರದಲ್ಲಿ ದೆಹಲಿಯಲ್ಲಿ ಧರಣಿ ಕುಳಿತಾಗ ಪ್ರಧಾನಿ ಮೋದಿ ಹೆದರಿದರು. ಇದು ಗೌಡರ ಸಾಧನೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಿಂದ ನೂರಾರು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡರು. ಶಾಸಕ ಡಿ.ಸಿ.ತಮ್ಮಣ್ಣ, ಶಾಸಕರಾದ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, , ಜಿಪಂ ಸದಸ್ಯರಾದ ಬೋರಯ್ಯ, ಮರಿಹೆಗೆಡೆ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಪ್ರುಲ್ಲಖಾನ್, ಜಿಲ್ಲಾಧ್ಯಕ್ಷ ಡಿ.ರಮೇಶ್, ಯುವ ರಾಜ್ಯ ಉಪಾಧ್ಯಕ್ಷ ಬೆಳ್ಳಿ ಲೋಕೇಶ್, ಜಿಲ್ಲಾಧ್ಯಕ್ಷ ಶಶಿಧರ್, ತಾಲೂಕು ಅಧ್ಯಕ್ಷ ಸಿ.ಟಿ.ಶಂಕರ್, ತಾಪಂ ಅಧ್ಯಕ್ಷೆ ಜಯಲಕ್ಷ್ಮಿ, ಪುರಸಭಾ ಅಧ್ಯಕ್ಷೆ ಲತಾ ಬಸವರಾಜು, ಮನುಕುಮಾರ್, ಹನುಮಂತೇಗೌಡ, ಎ.ಬಿ.ಬಿಳಿಗೌಡ, ನ.ಲಿ.ಕೃಷ್ಣ, ಇತರ ಮುಖಂಡರು ಉಪಸ್ಥಿತರಿದ್ದರು.







