ಮಹಿಳೆಯ ಸರ ಕಿತ್ತ ಪ್ರಕರಣ: ಮೂರು ವರ್ಷದ ಬಳಿಕ ಆರೋಪಿ ಸೆರೆ
ಪುತ್ತೂರು, ಡಿ. 1: ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದ ಮೂರು ವರ್ಷದ ಹಿಂದಿನ ಪ್ರಕರಣವೊಂದರ ಪ್ರಮುಖ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡಿನ ಮುಟ್ಟತ್ತೋಡಿ ನಿವಾಸಿ ಅಶ್ರಫ್ ಯಾನೆ ಅಝರುದ್ದೀನ್ (27) ಬಂಧಿತ ಆರೋಪಿ. ಮೂರು ವರ್ಷದ ಹಿಂದೆ ಕೈಕಾರ ಬಸ್ ತಂಗುದಾಣ ದಲ್ಲಿ ಮಹಿಳೆಯೋರ್ವರ ಕುತ್ತಿಗೆಯಿಂದ ಚಿನ್ನದ ಸರ ಎಳೆದು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ಸಂಪ್ಯ ಪೊಲೀಸರು ಪುತ್ತೂರು ತಾಲೂಕಿನ ಈಶ್ವರಮಂಗಲ ಎಂಬಲ್ಲಿ ಬಂಧಿಸಿದ್ದಾರೆ.
ಮೂರು ವರ್ಷದ ಹಿಂದೆ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಕೈಕಾರ ಎಂಬಲ್ಲಿರುವ ಬಸ್ ತಂಗುದಾಣದಲ್ಲಿ ಶೀಲಾವತಿ ರೈ ಎಂಬವರು ನಿಂತು ಕೊಂಡಿದ್ದ ಈ ವೇಳೆ ಬೈಕ್‌ನಲ್ಲಿ ಬಂದಿದ್ದ ಮೂವರು ಶೀಲಾವತಿ ರೈ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದರು. ಈ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆಗೆ ಸಂಬಂಧಿಸಿ ಪೊಲೀಸರು ಆರಂಭದಲ್ಲಿ ಕಾಸರಗೋಡು ಮೂಲದ ಮುಸ್ತಾಫ ಎಂಬಾತನನ್ನು ಬಂಧಿಸಿದ್ದರು. ಆತನ ವಿಚಾರಣೆ ವೇಳೆ ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ಭಾಗಿಯಾಗಿರುವ ಮಾಹಿತಿ ಲಭಿಸಿತ್ತು. ಆ ಇಬ್ಬರು ಆರೋಪಿಗಳ ವಿಳಾಸ ಪಡೆದು ನ್ಯಾಯಾಲಯದಿಂದ ವಾರಂಟ್ ಜಾರಿ ಮಾಡಲಾಗಿತ್ತು. ಈ ನಡುವೆ ಪೊಲೀಸರು ಇನ್ನೊಬ್ಬ ಆರೋಪಿ ಅಶ್ರು ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ ಪ್ರಕರಣದ ಪ್ರಮುಖ ಆರೋಪಿ ಅಶ್ರಫ್ ಯಾನೆ ಅಝರುದ್ದೀನ್ ತಲೆಮರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಇದೀಗ ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಗೋಪಾಲ್ ನಾಯ್ಕ ಅವರ ಮಾರ್ಗದರ್ಶನದಲ್ಲಿ ಸಂಪ್ಯ ಠಾಣೆಯ ಎಸ್.ಐ ಅಬ್ದುಲ್ ಖಾದರ್ ಮತ್ತು ಹೆಡ್‌ಕಾನ್‌ಸ್ಟೇಬಲ್‌ಗಳಾದ ಧರ್ಮಪಾಲ ಮತ್ತು ಸುರೇಶ್ ಗೌಡ ಅವರು ಪ್ರಕರಣದ ಪ್ರಮುಖ ಆರೋಪಿ ಅಶ್ರಫ್ ಯಾನೆ ಅಝರುದ್ದೀನ್ ಎಂಬಾತನನ್ನು ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲದಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ.
ಬಂಧಿತ ಅರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.







