ಕೊಟ್ಟಿಗೆಹಾರದಲ್ಲಿ ದತ್ತಜಯಂತಿ ಹಿನ್ನೆಲೆ ವಾಹನ ತಪಾಸಣೆ
ದತ್ತ ಜಯಂತಿ, ಮೀಲಾದುನ್ನಬಿ ಪ್ರಯುಕ್ತ ಪೋಲಿಸ್ ಬಿಗಿ ಭದ್ರತೆ

ಬಣಕಲ್, ಡಿ.1: ಚಿಕ್ಕಮಗಳೂರಿನಲ್ಲಿ ನಡೆಯಲಿರುವ ದತ್ತ ಜಯಂತಿ ಹಾಗೂ ಮೀಲಾದುನ್ನಬಿ ಹಿನ್ನೆಲೆಯಲ್ಲಿ ಅಶಾಂತಿ ಕದಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ತಪಾಸಣೆ ಹಾಗೂ ಪೋಲಿಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಬಣಕಲ್ ಪಿಎಸ್ಸೈ ಸಕ್ತಿವೇಲು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದತ್ತಜಯಂತಿ ಹಿನ್ನೆಲೆ ಎರಡು ದಿನಗಳಿಂದ ಕೊಟ್ಟಿಗೆಹಾರದ ಅರಣ್ಯ ಚೆಕ್ ಪೋಸ್ಟ್ ಬಳಿ ದ.ಕ.ಜಿಲ್ಲೆಯಿಂದ ಚಾರ್ಮಾಡಿ ಘಾಟ್ ಮಾರ್ಗವಾಗಿ ಬರುವ ಎಲ್ಲಾ ವಾಹನಗಳ ಮಾಹಿತಿಯನ್ನು ಕಲೆ ಹಾಕಿ ವಾಹನ ತಪಾಸಣೆ ನಡೆಸಲಾಗುತ್ತಿದ್ದು, ಹಗಲಿನ ವೇಳೆಯಲ್ಲಿ ಓರ್ವ ನಿಯೋಜಿತ ಪಿಎಸ್ಸೈ ಮತ್ತು ಐದು ಪೋಲಿಸ್ ಸಿಬ್ಬಂದಿ ಹಾಗೂ ರಾತ್ರಿಯ ಪಾಳೆಯದಲ್ಲಿ 1 ಎಎಸ್ಸೈ ಮತ್ತು 5 ಪೋಲಿಸ್ ಸಿಬ್ಬಂದಿ ನಿಯೋಜಿಲಾಗಿದೆ. ಠಾಣಾ ವ್ಯಾಪ್ತಿಯ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಮುಂಜಾಗ್ರತೆಯ ಕ್ರಮವಾಗಿ ಪೋಲಿಸ್ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದರು.
ಕೊಟ್ಟಿಗೆಹಾರವು ಸೂಕ್ಷ್ಮ ಗಡಿ ಪ್ರದೇಶವಾದ್ದರಿಂದ ಡಿ.2ರ ರಾತ್ರಿ 10 ಗಂಟೆಯಿಂದ ಡಿ.3ರ ರಾತ್ರಿ 12ರವರೆಗೆ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಕೊಟ್ಟಿಗೆಹಾರದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ವರ್ತಕರಿಗೆ ಸೂಚಿಸಲಾಗಿದ್ದು, ಕಾನೂನು ಪಾಲನೆಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.





