ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆ: ಬಿಜೆಪಿ ಜಯಭೇರಿ

ಲಕ್ನೊ, ಡಿ.1: ಉತ್ತರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 16 ನಾಗರಪಾಲಿಕೆ ಸ್ಥಾನಗಳ ಪೈಕಿ 14ರಲ್ಲಿ ಗೆಲುವು ಸಾಧಿಸುವ ಮೂಲಕ ಜಯಬೇರಿ ಬಾರಿಸಿದೆ. ಮಾಯಾವತಿಯ ಬಹುಜನ ಸಮಾಜ ಪಕ್ಷ ಒಂದು ಸ್ಥಾನವನ್ನು ಗೆದ್ದು ಇನ್ನೊಂದರಲ್ಲಿ ಮುನ್ನಡೆ ಸಾಧಿಸುವ ಮೂಲಕ ಎರಡನೇ ಸ್ಥಾನದಲ್ಲಿದೆ.
ಗುಜರಾತ್‌ನ ಮತದಾರರ ಮಧ್ಯೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಮ್ಮ ಛಾಪೊತ್ತುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಮಧ್ಯೆಯೇ ಬಂದಿರುವ ಉತ್ತರ ಪ್ರದೇಶದ ಸ್ಥಳೀಯ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಾಳಯಕ್ಕೆ ಆಘಾತ ನೀಡಿದೆ.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು ನಗರಸಭೆ ಮತ್ತು ನಗರ ಪಂಚಾಯತ್‌ಗಳಲ್ಲೂ ಮುನ್ನಡೆ ಸಾಧಿಸಿದ್ದು ಸಮಾಜವಾದಿ ಪಕ್ಷ ಎರಡನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ 16 ನಗರಪಾಲಿಕೆಗಳ ಜೊತೆಗೆ 198 ನಗರಸಭೆಗಳು ಮತ್ತು 438 ನಗರ ಪಂಚಾಯತ್‌ಗಳಿಗೆ ಚುನಾವಣೆ ನಡೆದಿತ್ತು.
ಈ ಗೆಲುವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾಗೆ ಅರ್ಪಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪ್ರಧಾನಿ ಮೋದಿಯವರ ಅಭಿವೃದ್ಧಿ ನೀತಿಗಳು ಮತ್ತು ಅಮಿತ್ ಶಾರ ಮಾರ್ಗದರ್ಶನದ ಫಲವಾಗಿ ಈ ಗೆಲುವನ್ನು ಸಾಧಿಸಿರುವುದಾಗಿ ತಿಳಿಸಿದ್ದಾರೆ. ಈ ವರ್ಷ ಮಾರ್ಚ್‌ನಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವನ್ನು ದಾಖಲಿಸಿತ್ತು.
ಈ ಗೆಲುವಿನಿಂದ ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ ಶೇಕಡಾ ನೂರು ಯಶಸ್ಸನ್ನು ಗಳಿಸುವ ಗುರಿಯನ್ನು ಸಾಧಿಸುವುದು ಸುಲಭವಾಗಲಿದೆ ಎಂದು ಆದಿತ್ಯನಾಥ್ ತಿಳಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ಯೋಗಿ, ಕೆಲವರು ಗುಜರಾತ್‌ನಲ್ಲಿ ದೊಡ್ಡದೊಡ್ಡ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಅವರಿಗೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಖಾತೆಯನ್ನು ತೆರೆಯಲೂ ಸಾಧ್ಯವಾಗಿಲ್ಲ ಮತ್ತು ಅಮೆಠಿಯಿಂದ ಅವರನ್ನು ಹೊರಗಸೆಯಲಾಗಿದೆ ಎಂದು ವ್ಯಂಗ್ಯಮಾಡಿದರು.
ಈ ವಿಜಯವನ್ನು ಬಿಜೆಪಿ ಕೇವಲ ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೆ ಚುನಾವಣೆಗೆ ಕ್ಷಣಗಣನೆ ಮಾಡುತ್ತಿರುವ ಗುಜರಾತ್‌ನಲ್ಲೂ ಆಚರಿಸುತ್ತಿದ್ದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ವಿರುದ್ಧ ಇದನ್ನೇ ಅಸ್ತ್ರವಾಗಿ ಬಳಸುವ ಸಾಧ್ಯತೆಯಿದೆ.
ರಾಜ್ಯದ ರಾಜಧಾನಿ ಲಕ್ನೊ ಇದೇ ಮೊದಲ ಬಾರಿ ಮಹಿಳಾ ಮೇಯರನ್ನು ಪಡೆಯಲಿದ್ದು ಬಿಜೆಪಿಯ ಸಂಯುಕ್ತ ಭಾಟಿಯಾ ಆ ಗೌರವವನ್ನು ಪಡೆಯಲಿದ್ದಾರೆ. 2012ರಲ್ಲಿ ಬಿಜೆಪಿ 12 ಸ್ಥಾನಗಳ ಪೈಕಿ 10ರಲ್ಲಿ ಗೆಲುವು ಸಾಧಿಸಿತ್ತು. ಎಸ್‌ಪಿ ಮತ್ತು ಬಿಎಸ್‌ಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಇನ್ನೆರಡು ಸ್ಥಾನಗಳನ್ನು ಗೆದ್ದುಕೊಂಡಿದ್ದರು. ಈ ಬಾರಿ ಅಯೋಧ್ಯ, ಸಹರನ್‌ಪುರ, ಫಿರೋಝಾಬಾದ್ ಮತ್ತು ಮಥುರಾ ಹೀಗೆ ನಾಲ್ಕು ಹೊಸ ಪುರಸಭೆಗಳನ್ನು ರಚಿಸಲಾಗಿದೆ.
ಮಾರ್ಚ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಸಾಧಿಸಿದ ಬಿಜೆಪಿ ಅನಿರೀಕ್ಷಿತ ಬೆಳವಣಿಗೆಯಲ್ಲಿ ಯೋಗಿ ಆದಿತ್ಯನಾಥ್‌ರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿತ್ತು. ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ತನ್ನ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ಯೋಗಿ ಹೆಗಲ ಮೇಲೆ ಬಿದ್ದಿತ್ತು. ಇದೇ ಕಾರಣದಿಂದ ಯೋಗಿ ಸ್ಥಳೀಯ ಚುನಾವಣೆಗಳು ನಡೆಯಲಿದ್ದ ಎಲ್ಲಾ 16 ಜಿಲ್ಲೆಗಳಿಗೆ ತೆರಳಿ 26 ರ್ಯಾಲಿಗಳಲ್ಲಿ ಭಾಗವಹಿಸಿದ್ದರು.







