ಕುರುಬ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸಲು ಸಿಎಂಗೆ ಮನವಿ
ಸಿದ್ದರಾಮಯ್ಯ-ರಾಯಣ್ಣ ಬ್ರಿಗೇಡ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
ಬಾಗಲಕೋಟೆ, ಡಿ.1: ಕುರುಬ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸಬೇಕೆಂದು ಒತ್ತಾಯಿಸಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಕೊಡುವ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ.
ಬಾಗಲಕೋಟೆಯ ಶ್ರೀ ಬಸವೇಶ್ವರ ಸಹಕಾರ ಬ್ಯಾಂಕ್‌ನ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸುವ ವೇಳೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿ, ಕುರುಬ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸಲೇಬೇಕೆಂದು ಪಟ್ಟು ಹಿಡಿದರು.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಸ್ಟಿ ವರ್ಗಕ್ಕೆ ಶೇ.3ರಷ್ಟು ಮಾತ್ರ ಮೀಸಲಾತಿಯಿದೆ. ಹೀಗಾಗಿ ಕುರುಬ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿ ಹೇಳಿದರು.
ಇದಕ್ಕೆ ಒಪ್ಪದ ಬ್ರಿಗೇಡ್ ಕಾರ್ಯಕರ್ತರು, ಎಸ್ಟಿ ವರ್ಗಕ್ಕೆ ಸೇರಿಸಲು ನಿಮ್ಮಿಂದ ಸಾಧ್ಯ. ಆದರೆ, ನೀವು ವಿಳಂಬ ಮಾಡುತ್ತಿದ್ದೀರಿ ಎಂದು ಆರೋಪಿಸಿದರು.
ಜಾತಿಗಳನ್ನು ಜಾತಿವಾರು ಪಟ್ಟಿಗೆ ಸೇರಿಸುವುದು ಕೇಂದ್ರ ಸರಕಾರದ ಕೆಲಸವೇ ಹೊರತು ನನ್ನದಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಜಾಯಿಷಿ ನೀಡಿದರು.
ಇಷ್ಟಕ್ಕೆ ತೃಪ್ತರಾಗದ ಬ್ರಿಗೇಡ್ ಕಾರ್ಯಕರ್ತರು ನೀವು ಭರವಸೆ ನೀಡಲೇಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಅಲ್ಲಿಯೇ ಇದ್ದ ಪೊಲೀಸರಿಗೆ ಬ್ರಿಗೇಡ್ ಕಾರ್ಯಕರ್ತರನ್ನು ಹೊರ ಕಳಿಸುವಂತೆ ಸೂಚಿಸಿದರು.







