ಹೃದಯಾಘಾತದಿಮದ ಡಿವೈಎಸ್ಪಿ ಶೇಖ್ ಹುಸೈನ್ ಮೃತ್ಯು

ಚಿಕ್ಕಮಗಳೂರು, ಡಿ.1: ನರಸಿಂಹರಾಜಪುರ ತಾಲೂಕು ಕೇಂದ್ರದಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮದ ಹಿನ್ನೆಲೆ ಕರ್ತವ್ಯದಲ್ಲಿದ್ದ ಡಿವೈಎಸ್ಪಿ ಶೇಖ್ ಹುಸೈನ್ (56) ತೀವ್ರ ಹೃದಯಾಘಾತದಿಂದ ಶುಕ್ರವಾರ ಮೃತಪಟ್ಟಿದ್ದಾರೆ.
ಮೂಲತಃ ಹಾಸನದವರಾದ ಶೇಖ್ ಹುಸೈನ್, ರಾಜ್ಯ ಗುಪ್ತ ದಳದ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಗುರುವಾರದಿಂದ ಇಂದು ಬೆಳಗ್ಗೆವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಕರ್ತವ್ಯದಲ್ಲಿದ್ದರು. ಬೆಳಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಮುಖ್ಯಮಂತ್ರಿ ನರಸಿಂಹರಾಜಪುರದಿಂದ ಹೆಲಿಕಫ್ಟರ್ ಮೂಲಕ ಬೆಂಗಳೂರಿನತ್ತ ತೆರಳಿದ್ದರು. ಇದಾದ ಕೆಲ ಸಮಯದಲ್ಲಿ ಎನ್.ಆರ್.ಪುರ ಠಾಣೆಯತ್ತ ಕ್ಯಾಂಟೀನ್ ವೊಂದರಲ್ಲಿ ಚಹ ಕುಡಿಯಲು ಕೂತಿದ್ದರು. ಚಹ ಕುಡಿಯುತ್ತಿದ್ದಂತೆ ತೀವ್ರ ಹೃದಯಾಘಾತಕ್ಕೊಳಗಾದ ಶೇಖ್‍ಹುಸೈನ್ ಅಲ್ಲಿಯೇ ಕುಸಿದು ಬಿದ್ದಿದ್ದರು. ಇಲಾಖೆಯ ಸಿಬ್ಬಂದಿ ಅವರನ್ನು ತಕ್ಷಣ ನರಸಿಂಹರಾಜಪುರದ ಸರಕಾರಿ ಆಸ್ಪತ್ರೆಗೆ ಸಾಗಿಸಿದಾದರೂ ಅವರು ಮೃತಪಟ್ಟಿದ್ದರು. ಹೃದಯಾಘಾತಕ್ಕೆ ಲೋ ಬಿಪಿ ಮತ್ತು ಶುಗರ್ ಏರಿಕೆ ಕಾರಣ ಎಂದು ಹೇಳಲಾಗಿದೆ.
ಮೃತರು ಪತ್ನಿ, ಒರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಮುಸ್ಲಿಂ ಧಾರ್ಮಿಕ ವಿಧಿ ವಿಧಾನದ ರೀತಿಯಲ್ಲಿ ಪಾರ್ಥೀವ ಶರೀರವನ್ನು ಮನೆಯತ್ತ ಕೊಂಡೊಯ್ಯಲಾಯಿತು.
ಆಸ್ಪತ್ರೆಯತ್ತ ನೂರಾರು ಮಂದಿ ಬಂದು ಮೃತರ ಪಾರ್ಥಿವ ಶರೀರದ ಅಂತಿಮ ನಮನ ಪಡೆದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ.ರಾಜಶೇಖರ್, ಕಾಂಗ್ರೆಸ್ ಮುಖಂಡ ರಾಜೇಗೌಡ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್ ಸ್ಥಳದಲ್ಲಿದ್ದರು.
ಎಸ್ಪಿ ಕೆ.ಅಣ್ಣಾಮಲೈ, ಅಡಿಷನಲ್ ಎಸ್ಪಿ ಜಗದೀಶ್, ಸಿಪಿಐ ಜಗನ್ನಾಥ, ಎಸ್ಸೈ ರವಿ ಸ್ಥಳದಲ್ಲಿದ್ದು ಅಗಲಿದ ಸಹೋದ್ಯೋಗಿಯನ್ನು ಕಂಡು ಕಂಬನಿ ಮಿಡಿದರು. ತಹಶೀಲ್ದಾರ್, ಇಒ ಹೊಂಗಯ್ಯ, ಸಿಒ ಕುರಿಯಾಕೋಸ್ ಗೌರವ ಸಲ್ಲಿಸಿದರು.







