ಒಂದು ಕುಟುಂಬಕ್ಕೆ ಒಂದು ಟಿಕೆಟ್: ಪರಮೇಶ್ವರ್
'ಸರಕಾರ-ಕೆಪಿಸಿಸಿ ಒಗ್ಗಟ್ಟಿನಿಂದ ಚುನಾವಣಾ ಯಾತ್ರೆ'

ಬೆಂಗಳೂರು, ಡಿ.1: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಹಾಗೂ ಕೆಪಿಸಿಸಿ ಎರಡೂ ಜತೆಗೂಡಿ ಒಗ್ಗಟ್ಟಿನಿಂದ ಚುನಾವಣಾ ಯಾತ್ರೆಯ ಸಿದ್ಧತೆಯಲ್ಲಿ ತೊಡಗಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರ ವಿಧಾನಸಭಾ ಚುನಾವಣಾ ಪ್ರಚಾರ ಯಾತ್ರೆಯಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲವೂ ಸರಾಗವಾಗಿ ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಚುನಾವಣಾ ಯಾತ್ರೆ ಮಾಡಿದ ತಕ್ಷಣ ನಾವು ಮಾಡಲೇಬೇಕೆಂದಿಲ್ಲ. ಯಾತ್ರೆ ಮಾಡಿದಷ್ಟಕ್ಕೆ ಚುನಾವಣಾ ತಯಾರಿ ಅಂತೇನಿಲ್ಲ. ನಾವು ಯಾತ್ರೆಗೂ ಮುನ್ನ ‘ಮನೆ ಮನೆಗೆ ಕಾಂಗ್ರೆಸ್’ ಎಂಬ ಅಭಿಯಾನವನ್ನು ಪ್ರಾರಂಭಿಸಿ ಯಶಸ್ವಿಯಾಗಿದ್ದೇವೆ. ಹೀಗೆ ನಮ್ಮದೇ ಆದ ಕಾರ್ಯತಂತ್ರದ ಮೂಲಕ ಚುನಾವಣಾ ಪ್ರಚಾರದಲ್ಲಿ ಈಗಾಗಲೇ ತೊಡಗಿದ್ದೇವೆ ಎಂದು ಹೇಳಿದರು.
ವಿಧಾನಸಭಾ ಚುನಾವಣೆಗಾಗಿ ಟಿಕೆಟ್ ಹಂಚಿಕೆ ಸಂಬಂಧ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿದೆ. ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂಬ ನಿಯಮ ಕಾಂಗ್ರೆಸ್‌ನಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ. ಇದೆಲ್ಲವನ್ನು ಗಮನಿಸಿಕೊಂಡೇ ಟಿಕೆಟ್ ಹಂಚಿಕೆಯಾಗಲಿವೆ ಎಂದರು.
ನಾನು ಕೊರಟಗೆರೆಯಲ್ಲಿಯೇ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಕಳೆದ ಬಾರಿ ಆಗಿರುವ ಕಹಿ ಅನುಭವ ಈ ಬಾರಿ ಸಂಭವಿಸಲಾರದು. ಈ ಬಾರಿ ಕೊರಟಗೆರೆ ಕ್ಷೇತ್ರದ ಜನತೆ ನನ್ನನ್ನು ಗೆಲ್ಲಿಸುವ ಮೂಲಕ ಜನಪರ ಆಡಳಿತ ನಡೆಸಲು ಅವಕಾಶ ಮಾಡಿಕೊಡುತ್ತಾರೆಂದು ನಂಬಿದ್ದೇನೆ.
-ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ







