ಒಖಿ ಚಂಡಮಾರುತ: ಸಾವಿನ ಸಂಖ್ಯೆ ಒಂಬತ್ತಕ್ಕೆ
ನೂರಾರು ಮೀನುಗಾರರು ನಾಪತ್ತೆ

ತಿರುವನಂತಪುರಂ, ಡಿ.1: ಒಖಿ ಚಂಡಮಾರುತದಿಂದ ಕರಾವಳಿ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡು ತೀವ್ರ ಸಂಕಷ್ಟಕ್ಕೀಡಾಗಿದ್ದು ಒಖಿ ಅಬ್ಬರಕ್ಕೆ ಬಲಿಯಾದವರ ಸಂಖ್ಯೆ ಒಂಬತ್ತಕ್ಕೇರಿದೆ. ಈ ಪೈಕಿ ಕೇರಳದಲ್ಲಿ ನಾಲ್ಕು ಮಂದಿ ಪ್ರಾಣವನ್ನು ಕಳೆದುಕೊಂಡಿದ್ದರೆ ತಮಿಳುನಾಡಿನಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ.
ತಮಿಳುನಾಡಿನಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ 62 ಮನೆಗಳು ಸಂಪೂರ್ಣವಾಗಿ ಧರಾಶಾಹಿಯಾಗಿದ್ದರೆ 240 ಮನೆಗಳು ಭಾಗಶಃ ಹಾನಿಗೀಡಾಗಿವೆ. ರಾಜ್ಯ ಸರಕಾರವು 16 ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಿದ್ದು ಇವುಗಳಲ್ಲಿ 1,044 ಮಂದಿ ಆಸರೆ ಪಡೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಮಳೆ ಸಂಬಂಧಿ ಘಟನೆಗಳಿಂದ ಮೃತಪಟ್ಟ ಐದು ಜನರ ಕುಟುಂಬಕ್ಕೆ ಇಕೆ ಪಳನಿಸ್ವಾಮಿ ಸರಕಾರ ತಲಾ ನಾಲ್ಕು ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ. ಕೇರಳದಲ್ಲಿ ಗುರುವಾರದಂದು ಮಳೆಯ ಅಬ್ಬರಕ್ಕೆ ನಾಲ್ಕು ಮಂದಿ ಸಾವನ್ನಪ್ಪಿದ್ದರು. ತಮಿಳುನಾಡು ಮತ್ತು ಕೇರಳ ದಕ್ಷಿಣ ಕರಾವಳಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ನೌಕಾಪಡೆಯ ನೆರವನ್ನು ಕೋರಲಾಗಿದೆ.
ಮಳೆ ಮತ್ತು ಗಾಳಿಯ ಅಬ್ಬರದ ಜೊತೆಗೆ ಕರಾವಳಿಗೆ ಅಪ್ಪಳಿಸಿದ ಒಖಿಯ ಹೊಡೆತಕ್ಕೆ ಸಿಲುಕಿ ಎರಡು ರಾಜ್ಯಗಳ ಎಂಬತ್ತು ಮೀನುಗಾರರು ಮತ್ತು ಐವತ್ತು ಬೋಟ್‌ಗಳು ನಾಪತ್ತೆಯಾಗಿವೆ.
ಕೇರಳದ 13 ಬೋಟುಗಳಲ್ಲಿದ್ದ 38 ಸಿಬ್ಬಂದಿ ಮತ್ತು ತಮಿಳುನಾಡಿನ ಒಂದು ಬೋಟ್ ಮತ್ತು ಅದರಲ್ಲಿದ್ದ ನಾಲ್ಕು ಮಂದಿ ನಾಪತ್ತೆಯಾಗಿರುವುದಾಗಿ ಶುಕ್ರವಾರ ರಕ್ಷಣಾ ವಕ್ತಾರ ತಿಳಿಸಿದ್ದರು. ಈ ಪೈಕಿ ನೌಕಾಪಡೆಯ ವಿವಾನ ಎಂಟು ಮಂದಿಯನ್ನು ರಕ್ಷಿಸಿತ್ತು.
ಶುಕ್ರವಾರ ಬೆಳಿಗ್ಗೆಯಿಂದ ನೌಕಾಪಡೆಯು ತನ್ನ ಬಳಿಯ ಈಜುಗಾರರ ತಂಡವನ್ನೊಳಗೊಂಡ ಅತ್ಯಂತ ಹಗುರವಾದ ಹೆಲಿಕಾಪ್ಟರನ್ನು ಕಾರ್ಯಾಚರಣೆಗೆ ಇಳಿಸಿದೆ. ಗುರುವಾರದಂದು ನೌಕಾಪಡೆಯು ಐದು ಹಡಗುಗಳನ್ನು ರಕ್ಷಣಾ ಕಾರ್ಯಾಚರಣೆಗೆ ಇಳಿಸಿತ್ತು. ಜೊತೆಗೆ ಲಕ್ಷದ್ವೀಪದಲ್ಲಿ ಮಾನವೀಯ ನೆರವಿಗಾಗಿ ಎರಡು ಹಡಗುಗಳನ್ನು ಪರಿಹಾರ ಸಾಮಗ್ರಿಗಳ ಜೊತೆಗೆ ಸಿದ್ಧವಾಗಿ ನಿಲ್ಲಿಸಲಾಗಿದೆ.
ವರದಿಗಳ ಪ್ರಕಾರ ನಾಪತ್ತೆಯಾದ ಮೀನುಗಾರರ ಪತ್ತೆ ಮತ್ತು ರಕ್ಷಣೆಗಾಗಿ ನೌಕಾಪಡೆಯ ಐದು ಹಡಗುಗಳು ಮತ್ತು ಕರಾವಳಿ ರಕ್ಷಣಾ ಪಡೆಯ ನಾಲ್ಕು ಹಡಗುಗಳನ್ನು ನಿಯೋಜಿಸಲಾಗಿದೆ. ಈ ಎಲ್ಲಾ ಹಡಗುಗಳನ್ನು ಕೇರಳ ಕರಾವಳಿಯ ಸಮೀಪ ನಿಯೋಜಿಸಲಾಗಿದ್ದು ಶುಕ್ರವಾರದಂದು ಹೆಚ್ಚುವರಿ ಡಾರ್ನಿಯರ್ ವಿಮಾನಗಳನ್ನು ರಕ್ಷಣಾ ಕಾರ್ಯಾಚರಣೆಗೆ ಇಳಿಸಲಾಗುವುದು.
ಪಕ್ಕದ ಶ್ರೀಲಂಕಾದಲ್ಲಿ ಭೀಕರ ಚಂಡಮಾರುತ್ತಕ್ಕೆ ಏಳು ಜನರು ಪ್ರಾಣವನ್ನು ಕಳೆದುಕೊಂಡಿದ್ದು 20,000 ಜನರು ಅತಂತ್ರಾರಾಗಿದ್ದಾರೆ ಎಂದು ವರದಿ ತಿಳಿಸುತ್ತದೆ.







