ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವೇ ಹೆಚ್ಚು

ಹೊಸದಿಲ್ಲಿ, ಡಿ.1: 2014-16ರ ಅವಧಿಯಲ್ಲಿ ಪರಿಶಿಷ್ಟ ಜಾತಿಗಳ ವಿರುದ್ಧ ನಡೆದಿರುವ ಅಪರಾಧ ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ಪರಿಶಿಷ್ಟ ಜಾತಿಗಳ ಮಹಿಳೆಯರ ವಿರುದ್ಧ ನಡೆದಿದೆ ಎಂದು ಗುರುವಾರ ಬಿಡುಗಡೆಗೊಂಡಿರುವ ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ(ಎನ್‌ಸಿಆರ್‌ಬಿ) ದ ವರದಿಯಲ್ಲಿ ತಿಳಿಸಲಾಗಿದೆ.
ಈ ಅಂಕಿಅಂಶದಲ್ಲಿ ಪೊಲೀಸರಲ್ಲಿ ದಾಖಲಾಗಿರುವ ದೂರನ್ನು ಮಾತ್ರ ಪರಿಗಣಿಸಲಾಗಿದೆ ಎಂದು ಎನ್‌ಸಿಆರ್‌ಬಿ ತಿಳಿಸಿದೆ. ನಗರಪ್ರದೇಶಗಳಲ್ಲಿ ಜಾತಿ ಆಧಾರದಲ್ಲಿ ವ್ಯಕ್ತಿಯನ್ನು ಗುರುತಿಸುವ ಪ್ರಕರಣಗಳು ಕಡಿಮೆ ಎಂಬ ಊಹೆಯನ್ನು ಈ ಅಂಕಿಅಂಶ ಸುಳ್ಳಾಗಿಸಿದೆ. ಎನ್‌ಸಿಆರ್‌ಬಿ ಅಂಕಿಅಂಶದ ಪ್ರಕಾರ ಉತ್ತರಪ್ರದೇಶದಲ್ಲಿ ಅತ್ಯಧಿಕ ದಲಿತ ದೌರ್ಜನ್ಯ ಪ್ರಕರಣ (ಶೇ.25.6) ದಾಖಲಾಗಿದ್ದರೆ, ಬಿಹಾರ (ಶೇ.14) ಮತ್ತು ರಾಜಸ್ತಾನ(ಶೇ.12.6) ಆ ಬಳಿಕದ ಸ್ಥಾನದಲ್ಲಿವೆ. ಕರ್ನಾಟಕದಲ್ಲಿ 1,869 (ಶೇ.4.3) ಪ್ರಕರಣ ನಡೆದಿದೆ . ಅಪರಾಧ ಪ್ರಕರಣದಲ್ಲಿ ಮಧ್ಯಪ್ರದೇಶ ನಾಲ್ಕನೇ ಸ್ಥಾನದಲ್ಲಿದ್ದರೆ , ಅಪರಾಧ ಪ್ರಮಾಣ ದರದಲ್ಲಿ ಮಧ್ಯಪ್ರದೇಶ ಪ್ರಥಮ ಸ್ಥಾನದಲ್ಲಿದೆ(ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಜನಸಂಖ್ಯೆ ಮತ್ತು ದಾಖಲಾಗಿರುವ ಅಪರಾಧ ಪ್ರಕರಣ ಸಂಖ್ಯೆಯ ಆಧಾರದಲ್ಲಿ ಅಪರಾಧ ಪ್ರಮಾಣ ದರವನ್ನು ಅಂದಾಜಿಸಲಾಗುತ್ತದೆ).
ಅತ್ಯಧಿಕ ದಲಿತ ದೌರ್ಜನ್ಯ ದಾಖಲಾಗಿರುವ 19 ಮೆಟ್ರೊಪಾಲಿಟನ್ ನಗರದ ಪಟ್ಟಿಯಲ್ಲಿ ಕೂಡಾ ಉತ್ತರಪ್ರದೇಶದ ಲಕ್ನೊ ನಗರ ಪ್ರಥಮ ಸ್ಥಾನದಲ್ಲಿದ್ದರೆ, ಪಾಟ್ನಾ ಮತ್ತು ಜೈಪುರ ಆ ಬಳಿಕದ ಸ್ಥಾನದಲ್ಲಿವೆ. 2015ರಲ್ಲಿ ಭಾರತದಲ್ಲಿ 38,670 ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿದ್ದರೆ 2016ರಲ್ಲಿ ಈ ಸಂಖ್ಯೆ 40,801ಕ್ಕೆ ತಲುಪಿದೆ. ದಾಖಲಾಗಿರುವ ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಬಹುತೇಕ ಮಹಿಳೆಯರ ವಿರುದ್ಧ ನಡೆದಿರುವ ಅಪರಾಧ ಪ್ರಕರಣಗಳಾಗಿದ್ದು ಹಲ್ಲೆ, ಲೈಂಗಿಕ ಪೀಡನೆ, ಹಿಂಬಾಲಿಸುವುದು, ಚುಡಾಯಿಸುವುದು, ಅಶ್ಲೀಲ ಪದ ಬಳಸಿ ನಿಂದಿಸುವುದು ಇತ್ಯಾದಿ ಸೇರಿದೆ.
ಮಹಿಳೆಯರ ವಿರುದ್ಧ ನಡೆದ ಅಪರಾಧದ ಪ್ರಮಾಣ ದಿಲ್ಲಿಯಲ್ಲಿ ಅಧಿಕವಾಗಿದ್ದು 2016ರಲ್ಲಿ ದಿಲ್ಲಿಯಲ್ಲಿ 15,310 ಪ್ರಕರಣ ದಾಖಲಾಗಿದೆ. ಮಹಿಳೆಯರ ವಿರುದ್ಧ ನಡೆದಿರುವ ಅಪರಾಧ ಪ್ರಕರಣದಲ್ಲಿ ಬಹುತೇಕ ಪ್ರಕರಣಗಳು, ಅಂದರೆ ಶೇ.32.6ರಷ್ಟು ಪತಿ ಅಥವಾ ಪತಿಯ ಸಂಬಂಧಿಕರಿಂದ ನಡೆದಿರುವ ಕ್ರೌರ್ಯ ಪ್ರಕರಣಗಳಾಗಿವೆ. ಶೇ.25ರಷ್ಟು ಪ್ರಕರಣ ಶೀಲ ಶಂಕಿಸಿ ನಡೆದಿರುವ ಹಲ್ಲೆ ಪ್ರಕರಣಗಳಾಗಿದ್ದರೆ, ಶೇ.19ರಷ್ಟು ಪ್ರಕರಣಗಳು ಮಹಿಳೆಯರ ಅಪಹರಣ ಹಾಗೂ ಶೇ.11.5ರಷ್ಟು ಅತ್ಯಾಚಾರ ಪ್ರಕರಣಗಳಾಗಿವೆ. 2016ರಲ್ಲಿ ದೇಶದಲ್ಲಿ ಮಹಿಳೆಯರ ಮೇಲೆ ನಡೆದಿರುವ ಹಲ್ಲೆ ಘಟನೆಗೆ ಸಂಬಂಧಿಸಿ ಉತ್ತರಪ್ರದೇಶದಲ್ಲಿ ಶೇ.14.5, ಪಶ್ಚಿಮ ಬಂಗಾಲದಲ್ಲಿ ಶೇ.9.6 ಪ್ರಕರಣ ದಾಖಲಾಗಿದೆ.
2016ರಲ್ಲಿ ಮಹಿಳೆಯರ ಮೇಲಿನ ಹಲ್ಲೆ ಘಟನೆಗೆ ಸಂಬಂಧಿಸಿ 19 ಮೆಟ್ರೊಪಾಲಿಟನ್ ನಗರಗಳ ಪೈಕಿ ದಿಲ್ಲಿಯಲ್ಲಿ ಅತ್ಯಧಿಕ (13,803) ಪ್ರಕರಣ ದಾಖಲಾದರೆ, ಮುಂಬೈಯಲ್ಲಿ 5,128 ಪ್ರಕರಣ ದಾಖಲಾಗಿದ್ದು ದ್ವಿತೀಯ ಸ್ಥಾನದಲ್ಲಿದೆ.







