ಮೀನುಗಾರರ ರಕ್ಷಣೆಗೆ ಸರ್ವಪ್ರಯತ್ನ : ಪಿಣರಾಯಿ ವಿಜಯನ್
ಒಖಿ ಚಂಡಮಾರುತ

ತಿರುವನಂತಪುರಂ, ಡಿ.1: ಒಖಿ ಚಂಡಮಾರುತದ ಪರಿಣಾಮವಾಗಿ ಕ್ಷುದ್ರಗೊಂಡಿರುವ ಸಮುದ್ರದಲ್ಲಿ ಸಿಕ್ಕಿಹಾಕಿಕೊಂಡಿರುವ ಮೀನುಗಾರರನ್ನು ರಕ್ಷಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೇರಳ ಸರಕಾರ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ತಿಳಿಸಿದರು.
ಪರಿಸ್ಥಿತಿಯನ್ನು ಪರಿಶೀಲಿಸಲು ತಿರುವನಂತಪುರಂನಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ವಿಜಯನ್ ಸಮುದ್ರದಲ್ಲಿ ಎಷ್ಟು ಮೀನುಗಾರರು ಸಿಲುಕಿಕೊಂಡಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿಯಿಲ್ಲ. ಆದರೆ ಅವರೆಲ್ಲರನ್ನೂ ಯಾವುದೇ ವಿಳಂಬ ಮಾಡದೆ ದಡಕ್ಕೆ ಕರೆತರಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
70 ಮೀನುಗಾರರು ಈಗಾಗಲೇ ರಕ್ಷಣಾ ತಂಡದ ಜೊತೆ ಸಂಪರ್ಕ ಸಾಧಿಸಿದ್ದು ಪ್ರತಿಕೂಲ ವಾತಾವರಣದ ಕಾರಣ ಅವರನ್ನು ರಕ್ಷಣಾ ತಂಡವು ಇನ್ನೂ ತಲುಪಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದರು.
ಒಂದು ಅಂದಾಜಿನ ಪ್ರಕಾರ ಸುಮಾರು 200 ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದು ಸದ್ಯ ಹಿಂದಿರುಗಿಲ್ಲ. ಚಂಡಮಾರುತವು ಲಕ್ಷದ್ವೀಪದತ್ತ ಚಲಿಸುತ್ತಿರುವ ಕಾರಣ ರಕ್ಷಣಾ ಕಾರ್ಯಾಚರಣೆಗೆ ಇನ್ನಷ್ಟು ಹೆಲಿಕಾಪ್ಟರ್‌ಗಳನ್ನು ನಿಯೋಜಿಸುವಂತೆ ರಕ್ಷಣಾ ಸಚಿವಾಲಯಕ್ಕೆ ಮನವಿ ಮಾಡಿರುವುದಾಗಿ ವಿಜಯನ್ ಹೇಳಿದರು.
ಸದ್ಯ ನಿಯೋಜಿಸಲಾಗಿರುವ ಹೆಲಿಕಾಪ್ಟರ್‌ಗಳಿಂದ ಕರಾವಳಿ ಕೇರಳ ಮತ್ತು ದ್ವೀಪ ಸಮೂಹದಲ್ಲಿ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಕೆಲವು ಮೀನುಗಾರರು ತಮ್ಮ ಬೋಟ್‌ಗಳನ್ನು ಬಿಟ್ಟು ದಡಕ್ಕೆ ಬರಲು ಕೇಳುತ್ತಿಲ್ಲವಾದ ಕಾರಣದಿಂದಲೂ ರಕ್ಷಣಾ ಕಾರ್ಯಾಚರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಮೀನುಗಾರರು ತಮ್ಮ ಬೋಟ್‌ಗಳನ್ನು ಬಿಟ್ಟು ದಡಕ್ಕೆ ಬರಲು ಒಪ್ಪುತ್ತಿಲ್ಲ. ಹಾಗಾಗಿ ರಕ್ಷಣಾ ಕಾರ್ಯದಲ್ಲಿ ಸಮಸ್ಯೆಯಾಗುತ್ತಿದೆ. ಆದರೆ ಇದರಿಂದ ಅವರು ಸುರಕ್ಷಿತವಾಗಿದ್ದಾರೆ ಎಂಬುದು ಖಚಿತವಾಗುತ್ತದೆ ಮತ್ತು ಅವರಿಗೆ ಆಹಾರ ಮತ್ತು ನೀರನ್ನು ಪೂರೈಸುವ ಕಾರ್ಯ ಮುಂದುವರಿದಿದೆ ಎಂದು ಪಿಣರಾಯಿ ತಿಳಿಸಿದರು.
ಸಮುದ್ರವು ಕ್ಷುದ್ರವಾಗಿರುವ ಕಾರಣ ತಮ್ಮ ಸಹಮೀನುಗಾರರನ್ನು ರಕ್ಷಿಸುವ ಸಲುವಾಗಿ ಸಮುದ್ರಕ್ಕೆ ಇಳಿಯಬಾರದು ಎಂದು ವರು ಮೀನುಗಾರರನ್ನು ಎಚ್ಚರಿಸಿದ್ದಾರೆ. ರಾಜ್ಯ ಸರಕಾರವು ಗುರುವಾರದಂದು ಮಧ್ಯಾಹ್ನ ಚಂಡಮಾರುತದ ಸೂಚನೆಯನ್ನು ಪಡೆದುಕೊಂಡಿದ್ದು ಕೂಡಲೇ ಪರಿಹಾರ ಮತ್ತು ರಕ್ಷಣಾ ಕಾರ್ಯಚರಣೆಯನ್ನು ಆರಂಭಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಹವಾಮಾನ ಇಲಾಖೆಯಿಂದ ಪಡೆದ ಮಾಹಿತಿಯನ್ನಾಧರಿಸಿ ಸದ್ಯದ ಪರಿಸ್ಥಿತಿಯು ಶನಿವಾರದವರೆಗೂ ಮುಂದುವರಿಯಲಿದೆ ಎಂದು ವಿಜಯನ್ ತಿಳಿಸಿದರು. ಆದರೆ ಚಂಡಮಾರುತವು ರಾಜ್ಯದ ದಡದಿಂದ ಗಂಟೆಗೆ 200 ಕಿ.ಮೀ ವೇಗದಲ್ಲಿ ದೂರ ಸಾಗುತ್ತಿದೆ ಎಂದು ಅವರು ಸೇರಿಸಿದರು.
ಗುರುವಾರದಂದು ಕೇರಳದ ಕರಾವಳಿಯಿಂದ 70 ಕಿ.ಮೀ ದೂರದಲ್ಲಿ ಚಂಡ ಮಾರುತವು ಉಂಟಾಗಿದ್ದು ಇದರಿಂದ ಈ ಭಾಗದಲ್ಲಿ ಧಾರಾಕಾರ ಮಳೆಯಾಗಿತ್ತು. ಕೇರಳವು ಎರಡು ಮರ್ಚೆಂಟ್ ನೇವಿ ಹಡಗುಗಳ ಸಹಾಯವನ್ನೂ ಕೋರಿದ್ದು ಹತ್ತು ಮೀನುಗಾರರನ್ನು ರಕ್ಷಿಸಲಾಗಿತ್ತು.
ಇದೇ ವೇಳೆ, ಕರಾವಳಿ ಜಿಲ್ಲೆಗಳಾದ ಪೂಂತುರ ಮತ್ತು ರಾಜ್ಯ ರಾಜಧಾನಿಯಲ್ಲಿ ಪ್ರತಿಭಟನಾಕಾರರು ರಸ್ತೆಗಳನ್ನು ಬಂದ್ ಮಾಡುವ ಮೂಲಕ ಸಮುದ್ರದಲ್ಲಿ ಸಿಲುಕಿರುವ ಮೀನುಗಾರರನ್ನು ರಕ್ಷಿಸುವಂತೆ ಸರಕಾರವನ್ನು ಆಗ್ರಹಿಸಿದರು.







