ಉಡುಪಿ: ಭರತಮುನಿ ಜಯಂತ್ಯುತ್ಸವ

ಉಡುಪಿ, ಡಿ.1: ಆಧ್ಯಾತ್ಮಿಕ ಕಲೆಯಾದ ನಾಟ್ಯವನ್ನು ವಿಖ್ಯಾತಿಗೊಳಿಸಿದ ಭರತಮುನಿಯ ಜಯಂತ್ಯುತ್ಸವ ನಾಟ್ಯ ಕ್ಷೇತ್ರಕ್ಕೆ ನೀಡುವ ಬಹುದೊಡ್ಡ ಕೊಡುಗೆ ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಉಡುಪಿ ರಾಧಾಕೃಷ್ಣ ನೃತ್ಯನಿಕೇತನ ವತಿಯಿಂದ ಆಯೋಜಿಸಲಾದ ಭರತಮುನಿ ಜಯಂತ್ಯುತ್ಸವವನ್ನು ರಾಜಾಂಗಣದಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನಾಟ್ಯ ಕಲೆ ಆಧ್ಯಾತ್ಮಿಕತೆಯ ಸಂಕೇತವಾಗಿದೆ. ನಾಟ್ಯಾರಾಧನೆ ಮೂಲಕ ಭಗವಂತನ ದರ್ಶನ ಪಡೆಯಲು ಸಾಧ್ಯ. ನಾಟ್ಯ ನಿಂತ ನೀರಾಗದೆ ನಿರಂತರ ಹರಿಯುತ್ತಿರಬೇಕು. ನಾಟ್ಯಾಭ್ಯಾಸ ನಡೆಸಿ ನೃತ್ಯ ಕಲೆಯ ಅಭಿವೃದ್ಧಿಗೆ ಮಹತ್ವ ದ ಕೊಡುಗೆ ನೀಡಬೇಕೆಂದು ಸ್ವಾಮೀಜಿ ಕರೆ ನೀಡಿದರು.
ಹಿರಿಯರಾದ ಗುರು ವಿದುಷಿ ಕೆ.ವಸಂತಿ ರಾಮ್ ಭಟ್ ಉಡುಪಿ ಹಾಗೂ ಗುರು ವಿದ್ವಾನ್ ಶ್ರೀನಿವಾಸ ಭಟ್ ಪುತ್ತೂರು ಇವರಿಗೆ ಭರತ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದುಷಿಯರಾದ ಅದ್ವಿಕಾ ಶೆಟ್ಟಿ, ಕಾವ್ಯಾ ಹೆಗಡೆ, ದಿಶಾ, ಶ್ರೀಪದ ರಾವ್ ಇವರನ್ನು ಗುರು ರಾಧಾಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಣಿಪಾಲ ಮುನಿಯಾಲು ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಸತ್ಯನಾರಾಯಣ ಬಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಾಂತ್ರಿಕ ವಿಭಾಗದ ಪೂರ್ಣಿಮಾ ಹಾಗೂ ಸಂಚಾಲಕ ಬಿ. ಮುಳೀಧರ ಸಾಮಗ ಉಪಸ್ಥಿತರಿದ್ದರು.
ನೃತ್ಯ ಗುರು ವಿದುಷಿ ವೀಣಾ ಎಂ.ಸಾಮಗ ಸ್ವಾಗತಿಸಿದರು. ಲಕ್ಷ್ಮೀ ಕಡೆಕಾರ್ ಪ್ರಾರ್ಥಿಸಿ, ಡಾ.ರಶ್ಮಿ ಗುರುಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
ಶ್ರೀಕೃಷ್ಣ ಮಠದ ಎದುರಿನಿಂದ ನಟರಾಜ ಮೂರ್ತಿ, ನಾಟ್ಯ ಶಾಸಗ್ರಂಥ, ಗಣ್ಯರನ್ನೊಳಗೊಂಡ ಮೆರವಣಿಗೆ ರಾಜಾಂಗಣದವರೆಗೆ ಸಾಗಿಬಂತು. ಉದ್ಘಾಟನಾ ಸಮಾರಂಭದ ಬಳಿಕ ಭರತನಾಟ್ಯ, ಕಥಕ್ ಹಾಗೂ ವಿಶ್ವರೂಪ ದರ್ಶನ ಮತ್ತು ಅಷ್ಟಲಕ್ಷ್ಮೀ ನೃತ್ಯ ರೂಪಕ ನಡೆಯಿತು.







