ಇಎಸ್‌ಐ ಮಂಗಳೂರು ಉಪಪ್ರಾದೇಶಿಕ ಕಚೇರಿ ರದ್ದು; ಪ್ರತಿಭಟನೆ
ಉಡುಪಿ, ಡಿ.1: ಕಾರ್ಮಿಕರ ವಿಮಾ ಯೋಜನೆ (ಇಎಸ್‌ಐ) ಮಂಗಳೂರು ಉಪ ಪ್ರಾದೇಶಿಕ ಕಚೇರಿಯನ್ನು ರದ್ದುಗೊಳಿಸಲು ಕೇಂದ್ರ ಸರಕಾರ ಹಾಗೂ ರಾಜ್ಯ ಕಾಮ್‌ಗಾರ್ ವಿಮಾ ಯೋಜನೆಯು ನೀಡಿರುವ ಆದೇಶವನ್ನು ಅಖಿಲ ಭಾರತ ಮಾಹಿತಿ ಸೇವಾ ಸಮಿತಿಯು ವಿರೋಧಿಸಲಿದೆ ಎಂದು ಸಮಿತಿಯ ಕರ್ನಾಟಕ ಅಧ್ಯಕ್ಷ ಗೋಪಾಲ ಎ.ಕೋಟಿಯಾರ್ ಅವರು ಶುಕ್ರವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸರಕಾರದ ಕಾರ್ಮಿಕ ಸಚಿವರು ಹಾಗೂ ಇಎಸ್‌ಐನ ಹೊಸದಿಲ್ಲಿಯ ಮಹಾ ನಿರ್ದೇಶಕರು ಮೂಲ ಕಾರಣರಾಗಿದ್ದಾರೆ. ಮಂಗಳೂರು ಉಪಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುವುದರಿಂದ ಉಡುಪಿ ಮತ್ತು ದ.ಕ. ಜಿಲ್ಲೆಗಳ 3,50,000 ಇಎಸ್‌ಐ ಕಾರ್ಮಿಕರಿಗೆ ಹಾಗೂ 10,000 ಉದ್ಯೋಗದಾತರಿಗೆ ತೊಂದರೆಗಳಾಗಲಿವೆ ಎಂದವರು ವಿವರಿಸಿದರು.
ಮಂಗಳೂರು ಪ್ರಾದೇಶಿಕ ಉಪಕಚೇರಿಯು ಬೆಂಗಳೂರಿಗೆ ವರ್ಗಾವಣೆ ಗೊಂಡರೆ ಪ್ರತಿಯೊಬ್ಬ ಕಾರ್ಮಿಕರು ಹಾಗೂ ಉದ್ಯೋಗದಾತರು ತಮ್ಮ ಯಾವುದೇ ಕೆಲಸ ಕಾರ್ಯಗಳಿಗೆ ಬೆಂಗಳೂರಿಗೆ ತೆರಳಬೇಕಾಗುತ್ತದೆ. ಕಾರ್ಮಿಕ ವಿಮಾ ಯೋಜನೆ, ದೇಶದ ಕಾರ್ಮಿಕರ ಸೋಷಿಯಲ್ ಸೆಕ್ಯುರಿಟಿ ಎಂದು ಪ್ರಧಾನಿ ಪದೇ ಪದೇ ಹೇಳಿದರೂ, ತಮ್ಮ ಕೈಕೆಳಗೆ ಇರುವ ಕಾರ್ಮಿಕ ವಿಮಾ ಯೋಜನೆಯಲ್ಲಿ ನಡೆಯುವ ಭ್ರಷ್ಟಾಚಾರದ ಕುರಿತಂತೆ ಅವರು ಕುರುಡರಾಗಿದ್ದಾರೆ ಎಂದು ಆರೋಪಿಸಿದರು.
ವಂಚನೆಯ ಉದ್ದೇಶ: ಮಂಗಳೂರು ಉಪಕಚೇರಿಯನ್ನು ಬಂದ್ ಮಾಡುವ ಮೂಲಕ ಕಾರ್ಮಿಕರನ್ನು ವಂಚಿಸುವ ಉದ್ದೇಶ ಹೊಂದಿರುವುದು ಸ್ಪಷ್ಟವಾಗುತ್ತದೆ ಎಂದಿರುವ ಕೋಟಿಯಾರ್, ಈ ಕಾರ್ಮಿಕ ವಿಮಾ ಯೋಜನೆಯನ್ನು ರದ್ದುಪಡಿಸಿ, ದೇಶದ ಮೂರು ಪ್ರಮುಖ ಉದ್ಯಮಿಗಳು ನಡೆಸುತ್ತಿರುವ ಅವರ ಖಾಸಗಿ ವಿಮಾ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.
ಇಎಸ್‌ಐ ಎಂಬುದು ದೇಶದ ಕಾರ್ಮಿಕರಿಗೆ ಸರಕಾರದ ಮೂಲಕ ಸಿಗುವ ಮಾನವೀಯ ಮೂಲಭೂತ ಹಕ್ಕು. ಅದನ್ನು ರದ್ದು ಮಾಡಲು, ಸರಕಾರೇತರ ಸಂಸ್ಥೆಯಾಗಿರುವ ಅಖಿಲ ಭಾರತ ಮಾಹಿತಿ ಸೇವಾ ಸಮಿತಿ ಎಂದಿಗೂ ಅವಕಾಶ ನೀಡುವುದಿಲ್ಲ ಎಂದವರು ಹೇಳಿದರು.
ಮಂಗಳೂರು ಉಪಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಿದರೆ, ದೇಶಾದ್ಯಂತದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಆಂದೋಲ, ಧರಣಿಯನ್ನು ಈ ತಿಂಗಳು ನಡೆಸಲು ನಿರ್ಧರಿಸಲಾಗಿದೆ ಎಂದು ಕೋಟಿಯಾರ್ ತಿಳಿಸಿದರು.
ಬೇಡಿಕೆಗಳು: ಮಂಗಳೂರು ಉಪಕಚೇರಿಯ ಸ್ಥಳಾಂತರವನ್ನು ರದ್ದುಪಡಿಸ ಬೇಕು. ಮಂಗಳೂರಿಗೆ ಉಪಕಚೇರಿ ಬೇಕೇ ಬೇಕು. ಸ್ಥಗಿತಗೊಳಿಸಿದ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯನ್ನು ಮಂಗಳೂರಿನಲ್ಲಿ ಪುನರಾರಂಭಿಸಬೇಕು. ಪ್ರತಿಯೊಂದು ಔಷಧಾಲಯಗಳಲ್ಲಿ ವೈದ್ಯರು ಹಾಗೂ ಶುಶ್ರೂಷಕಿಯರು ಹಾಗೂ ಎಲ್ಲಾ ಔಷಧಿಗಳು ಸಿಗುವಂತಾಗಬೇಕು.
ಮಂಗಳೂರು ಇಎಸ್‌ಐ ಆಸ್ಪತ್ರೆಗೆ ಆಗತ್ಯ ವೈದ್ಯರನ್ನು ಕೂಡಲೇ ನೇಮಕ ಗೊಳಿಸಬೇಕು. ಅಲ್ಲಿ ಸರಿಯಾದ ತಪಾಸಣಾ ಉಪಕರಣಗಳು ಹಾಗೂ ಪ್ರಯೋಗಾಲಯಗಳನ್ನು ತೆರೆಯಬೇಕು. ಉಡುಪಿ ಜಿಲ್ಲೆಯಲ್ಲಿ ಕೂಡಲೇ ಇಎಸ್‌ಐ ಆಸ್ಪತ್ರೆಯನ್ನು ತೆರೆಯಬೇಕು.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಸೇವಾ ಸಮಿತಿಯ ಮಣಿಪಾಲ ಅಧ್ಯಕ್ಷ ಎನ್.ನರಸಿಂಹ ಮೂರ್ತಿ, ಧರ್ಮಪ್ಪ ಉಪಸ್ಥಿತರಿದ್ದರು.







