ಕನ್ನಡದ ವೀರ ವನಿತೆಯರ ಅವಹೇಳನ: ಪೋಸ್ಟ್ ಕಾರ್ಡ್ ವಿರುದ್ಧ ಎಫ್‌ಐಆರ್

ಬೆಂಗಳೂರು, ಡಿ.1: ಕನ್ನಡದ ವೀರವನಿತೆಯರಾದ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಅವರ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವ ಆರೋಪದ ಮೇಲೆ ಪೋಸ್ಟ್ ಕಾರ್ಡ್ ವಿರುದ್ಧ ಸಂಜಯ್‌ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಕರ್ನಾಟಕ ಪ್ರದೇಶ ಲಿಂಗಾಯತ ಸಂಘ ಒತ್ತಾಯಿಸಿದೆ.
ಸಂಘದ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರು ಅವರು ನೀಡಿದ ದೂರಿನ ಅನ್ವಯ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾದ ಹಿನ್ನೆಲೆಯಲ್ಲಿ ಪೋಸ್ಟ್ ಕಾರ್ಡ್ ವಿರುದ್ಧ ಐಪಿಸಿ 295(ಎ) (ಉದ್ದೇಶ ಪೂರ್ವಕವಾಗಿ ದ್ವೇಷದ ಭಾವನೆಯಿಂದ ಅಪಮಾನ ಎಸಗಿದ ಆರೋಪ) ಅನ್ವಯ ದೂರು ದಾಖಲಾಗಿದೆ.
ಈ ಬಗ್ಗೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರು, ಪೋಸ್ಟ್ ಕಾರ್ಡ್‌ನ ವಿವಾದ ಲೇಖನದ ಹಿಂದೆ ವಿವೇಕ್ ಶೆಟ್ಟಿ ಹಾಗೂ ಮಹೇಶ್ ಹೆಗಡೆ ಎಂಬವರ ಕೈವಾಡ ಇದೆ. ಹೀಗಾಗಿ, ಈ ಇಬ್ಬರನ್ನೂ ಶೀಘ್ರದಲ್ಲಿಯೇ ಪೊಲೀಸರು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ದೂರಿನಲ್ಲಿ ಏನಿದೆ: "ಪೋಸ್ಟ್ ಕಾರ್ಡ್ ಎಂಬ ವೆಬ್ ಸೈಟ್ ನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ಜತೆ ಅನೈತಿಕ ಸಂಬಂಧ ವನ್ನಿಟ್ಟುಕೊಂಡಿದ್ದಳು. ಒನಕೆ ಓಬವ್ವ ಹೈದರಾಲಿಯ ಜತೆ ಮಂಚ ಹಂಚಿ ಕೊಂಡಿದ್ದಳು" ಎಂದೆಲ್ಲಾ ಬರೆದು ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಹರಿಬಿಟ್ಟು ಸಮಾಜದ ಸ್ವಾಸ್ಥ್ಯವನ್ನು ಕದಡುತ್ತಿರುವ ಪೋಸ್ಟ್ ಕಾರ್ಡ್ ವಿರುದ್ಧ ಮತ್ತು ಇದರ ಹಿಂದಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಸಂಜಯ್‌ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.







