ಡೋಕಾ ಲಾ ಸಮೀಪ ಚಳಿಗಾಲದಲ್ಲೂ ಸೈನಿಕರ ನಿಯೋಜನೆ: ಚೀನಾ ಇಂಗಿತ

ಬೀಜಿಂಗ್, ಡಿ. 1: ಭಾರತದೊಂದಿಗೆ ಡೋಕಾ ಲಾ ಬಿಕ್ಕಟ್ಟು ಏರ್ಪಟ್ಟ ಸ್ಥಳದ ಸಮೀಪದಲ್ಲಿ ಈ ಚಳಿಗಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸುವ ಇಂಗಿತವನ್ನು ಚೀನಾ ಸೇನೆ ಗುರುವಾರ ವ್ಯಕ್ತಪಡಿಸಿದೆ.
ಈಶಾನ್ಯದ ರಾಜ್ಯಗಳನ್ನು ಸಂಪರ್ಕಿಸುವ ಭಾರತದ ಕಿರಿದಾದ ಪ್ರದೇಶದ ಸಮೀಪ ಆಯಕಟ್ಟಿನ ರಸ್ತೆ ನಿರ್ಮಿಸಲು ಚೀನಾ ಆರಂಭಿಸಿದ ಬಳಿಕ ಈ ವರ್ಷದ ಜೂನ್ ತಿಂಗಳಲ್ಲಿ ಬಿಕ್ಕಟ್ಟು ಆರಂಭಗೊಂಡಿತ್ತು.
ರಸ್ತೆ ನಿರ್ಮಾಣಗೊಳ್ಳುತ್ತಿರುವ ಸ್ಥಳ ತನಗೆ ಸೇರಿದ್ದು ಎಂದು ಚೀನಾ ಹೇಳಿಕೊಂಡರೆ, ಅದು ತನ್ನದು ಎಂಬುದಾಗಿ ನೆರೆಯ ಭೂತಾನ್ ಕೂಡ ಹೇಳಿತ್ತು. ಭಾರತೀಯ ಸೈನಿಕರು ಭೂತಾನ್ ಪರವಾಗಿ ಮುನ್ನುಗ್ಗಿ ರಸ್ತೆ ನಿರ್ಮಾಣಕ್ಕೆ ತಡೆಯೊಡ್ಡಿದ್ದರು.
ಈ 73 ದಿನಗಳ ಬಿಕ್ಕಟ್ಟು ಅಂತಿಮವಾಗಿ ಆಗಸ್ಟ್ 28ರಂದು ಕೊನೆಗೊಂಡಿತು. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ರಸ್ತೆ ನಿರ್ಮಾಣವನ್ನು ನಿಲ್ಲಿಸಿತು.
ಚೀನಾ ನಿರ್ಮಿಸುತ್ತಿರುವ ರಸ್ತೆಯು ಆ ಪ್ರದೇಶದಲ್ಲಿ ತಾನು ಹೊಂದಿರುವ ಕಿರಿದಾದ ಪ್ರದೇಶಕ್ಕೆ ಬೆದರಿಕೆಯಾಗಿದೆ ಎಂಬುದಾಗಿ ಭಾರತ ವಾದಿಸಿತ್ತು.
ಈವರೆಗಿನ ಸಂಪ್ರದಾಯದಂತೆ, ಚಳಿಗಾಲದ ಅವಧಿಯಲ್ಲಿ ಡೋಕಾ ಲ ಪ್ರದೇಶದ ಮುಂಚೂಣಿ ಪ್ರದೇಶಗಳಿಂದ ಭಾರತ ಮತ್ತು ಚೀನಾಗಳೆರಡೂ ತಮ್ಮ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದವು. ಈ ಭಾಗದಲ್ಲಿ ಚಳಿಗಾಲ ತುಂಬಾ ಕಠಿಣವಾಗಿರುತ್ತದೆ.
ಡೋಕಾ ಲಾ ಬಿಕ್ಕಟ್ಟು ಏರ್ಪಟ್ಟ ಸ್ಥಳದ ಸಮೀಪ ದೊಡ್ಡ ಸಂಖ್ಯೆಯ ಸೈನಿಕರ ನಿಯೋಜನೆಯನ್ನು ಮುಂದುವರಿಸಲಾಗುವುದು ಹಾಗೂ ಚಳಿಗಾಲದಲ್ಲಿ ಆ ಸ್ಥಳದಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಸಂಪ್ರದಾಯವನ್ನು ಕೈಬಿಡಲಾಗುವುದು ಎಂಬ ವರದಿಗಳ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ವು ಕಿಯನ್, ‘‘ಡಾಂಗ್‌ಲಾಂಗ್ (ಡೋಕಾ ಲಾ) ಚೀನಾದ ಭೂಭಾಗವಾಗಿದೆ’’ ಎಂದರು.
‘‘ಈ ತತ್ವದ ಆಧಾರದಲ್ಲಿ, ಸೇನೆ ನಿಯೋಜನೆ ಬಗ್ಗೆ ನಾವೇ ನಿರ್ಧಾರ ತೆಗೆದುಕೊಳ್ಳುತ್ತೇವೆ’’ ಎಂದು ಅವರು ಹೇಳಿದರು. ಆದರೆ, ಅವರು ಹೆಚ್ಚಿನ ವಿವರಗಳನ್ನು ನೀಡಲಿಲ್ಲ.
ಡೋಕಾ ಲಾ ಸಮೀಪದ ಯಟುಂಗ್‌ನಲ್ಲಿ ಚೀನಾ ಸೈನಿಕರ ನಿರಂತರ ಉಪಸ್ಥಿತಿಯ ಹಿನ್ನೆಲೆಯಲ್ಲಿ, ಭಾರತವೂ ಅಲ್ಲಿ ತನ್ನ ಸೈನಿಕರನ್ನು ನಿಯೋಜಿಸಿದೆ ಎನ್ನಲಾಗಿದೆ.







