ಗುಜರಾತ್ ಆರ್ಚ್ ಬಿಷಪ್‌ಗೆ ಚುನಾವಣೆ ಆಯೋಗ ನೋಟಿಸ್: ಕಾಂಗ್ರೆಸ್ ಖಂಡನೆ
ಬೆಂಗಳೂರು, ಡಿ.1: ರಾಷ್ಟ್ರೀಯವಾದಿ ಶಕ್ತಿಗಳ ವಿರುದ್ಧ ಪ್ರಾರ್ಥಿಸಿ ಎಂದು ಕರೆ ನೀಡಿದ್ದ ಗುಜರಾತ್‌ನ ಆರ್ಚ್ ಬಿಷಪ್‌ಗೆ ಚುನಾವಣಾ ಆಯೋಗ ನೋಟಿಸ್ ಜಾರಿ ನೀಡಿರುವುದನ್ನು ಬೆಂಗಳೂರು ವಲಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ, ಧರ್ಮಬೋಧಕ ಡಾ.ಥಾಮ್ಸನ್ಸ್ ಸ್ಮಿತ್ ಖಂಡಿಸಿದ್ದಾರೆ.
ಇದು ಅಲ್ಪಸಂಖ್ಯಾತರ ಮೇಲಿನ ಬೆದರಿಕೆಯಾಗಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ಗುಜರಾತ್ ಹಾಗೂ ದೇಶದ ಜನರು ಇದಕ್ಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಧರ್ಮ ಬೋಧಕರಾಗಿ ಅವರಿಗೆ ತಮ್ಮ ಅನುಯಾಯಿಗಳಿಗೆ ಈ ರೀತಿಯ ಸಲಹೆ ನೀಡುವ ಹಕ್ಕಿದೆ. ಅವರು ತಂದೆ ಸಮಾನರಾಗಿ ಸಲಹೆ ನೀಡಬಹುದು ಎಂದು ಹೇಳಿದ್ದಾರೆ.
ಚುನಾವಣೆ ಆಯೋಗ ಬಿಷಪ್ ಅವರಿಗೆ ನೋಟಿಸ್ ನೀಡಿರುವುದು ಪ್ರಜಾಪ್ರಭುತ್ವ ಹಾಗೂ ಕಾನೂನು ವಿರೋಧಿ ನೀತಿಯಾಗಿದೆ. ಇದಕ್ಕೆ ಕೇಂದ್ರ ಸರಕಾರದ ಒತ್ತಡವೇ ಕಾರಣ. ಇಂತಹ ಸರಕಾರ ಹೆಚ್ಚು ದಿನ ಅಧಿಕಾರದಲ್ಲಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಗುಜರಾತ್‌ನ ಗಾಂಧಿನಗರದ ಆರ್ಚ್ ಬಿಷಪ್ ಥಾಮಸ್ ಮೆಕ್ವಾನ್ ಕಳೆದ ವಾರ ರಾಷ್ಟ್ರೀಯವಾದಿ ಶಕ್ತಿಗಳನ್ನು ಚುನಾವಣೆಯಲ್ಲಿ ತಿರಸ್ಕರಿಸಿ ಎಂದು ಕ್ರೈಸ್ತ ಸಮುದಾಯಕ್ಕೆ ಕರೆ ನೀಡಿದ್ದರು. ರಾಷ್ಟ್ರೀಯವಾದಿ ಶಕ್ತಿಗಳಿಂದ ಅಲ್ಪಸಂಖ್ಯಾತ ಸಮುದಾಯದಲ್ಲಿ ಅಭದ್ರತೆ ಹೆಚ್ಚಾಗುತ್ತಿದೆ. ದೇಶದ ಗಣತಂತ್ರ ಗಂಡಾಂತರದಲ್ಲಿದೆ. ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ. ಇವುಗಳಿಂದ ದೇಶವನ್ನು ರಕ್ಷಿಸಿ, ಮಾನವರನ್ನು ಸಂವಿಧಾನವನ್ನು ಗೌರವಿಸುವವರನ್ನು ಚುನಾವಣೆಯಲ್ಲಿ ಆರಿಸಿ ಎಂದು ಆರ್ಚ್ ಬಿಷಪ್ ಹೇಳಿದ್ದರು.
ಗಾಂಧಿನಗರದ ಜಿಲ್ಲಾಧಿಕಾರಿ ಆರ್ಚ್ ಬಿಷಪ್‌ಗೆ ನೋಟಿಸ್ ಜಾರಿ ಮಾಡಿದ್ದರು.







