ಆಧಾರ ರಹಿತ ಆರೋಪ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ಬೆಂಗಳೂರು, ಡಿ.1: ಬಿಜೆಪಿ ನಾಯಕರು ಸಚಿವರಾದ ವಿನಯ್ ಕುಲಕರ್ಣಿ ಹಾಗೂ ಕೆ.ಜೆ.ಜಾರ್ಜ್ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ವತಿಯಿಂದ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಸ್.ಮನೋಹರ್, ಭ್ರಷ್ಟಾಚಾರದಲ್ಲಿ ದಾಖಲೆ ನಿರ್ಮಿಸಿರುವ ಬಿಜೆಪಿ ನಾಯಕರು ಮೊದಲು ಯಾವ ನೈತಿಕತೆಯ ಆಧಾರದ ಮೇಲೆ ರಾಜೀನಾಮೆ ಕೇಳುತ್ತಿದ್ದಾರೆ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ, ಡಿನೋಟಿಫಿಕೇಷನ್, ಕೆಐಎಡಿಬಿ ಮತ್ತು ಪ್ರೇರಣಾ ಟ್ರಸ್ಟ್ ಹಗರಣದಲ್ಲಿ ಜೈಲು ಸೇರಿದ್ದ ಯಡಿಯೂರಪ್ಪ ಇಂದು ಕಾಂಗ್ರೆಸ್ ಸರಕಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸಚಿವ ವಿನಯ್ ಕುಲಕರ್ಣಿ ರಾಜೀನಾಮೆಗೆ ಒತ್ತಾಯ ಮಾಡುತ್ತಿರುವ ಬಿಜೆಪಿಯ ಜಗದೀಶ್ ಶೆಟ್ಟರ್ ಹಾಗೂ ಪ್ರಹ್ಲಾದ್ ಜೋಷಿ ಕ್ರಿಮಿನಲ್ ಆರೋಪ ಹೊತ್ತಿದ್ದಾರೆ. ಇವರು ರಿಯಲ್ ಎಸ್ಟೇಟ್ ದಂಧೆಯಲ್ಲಿ ನಿರತರಾಗಿದ್ದ ಜಿಲ್ಲಾ ಪಂಚಾಯತ್ ಸದಸ್ಯ ಬಿಜೆಪಿಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ನ್ಯಾಯಾಂಗ ತನಿಖೆ ನಡೆಯುತ್ತಿದ್ದು, ಇದರಲ್ಲಿ ಸಚಿವರ ಹೆಸರನ್ನು ಪ್ರಸ್ತಾಪಿಸುವ ಕೀಳು ಮಟ್ಟದ ರಾಜಕೀಯ ಬಿಜೆಪಿ ನಾಯಕರು ನಡೆಸುತ್ತಿದ್ದಾರೆ ಎಂದರು.
ಮುಖಂಡ ಎಂ.ಎ.ಸಲೀಂ ಮಾತನಾಡಿ, ಸಚಿವ ವಿನಯ್ ಕುಲಕರ್ಣಿಯ ಅಭಿವೃದ್ಧಿ ಸಹಿಸಲಾಗದ ಬಿಜೆಪಿ ನಾಯಕರು ಕೀಳು ಮಟ್ಟದ ರಾಜಕೀಯ ಮಾಡಲು ಮುಂದಾಗಿದ್ದಾರೆ ಎಂದ ಅವರು, ಸಚಿವ ಜಾರ್ಜ್ ವಿರುದ್ಧ ಹೋರಾಟ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಕಾನೂನಿನ ಅರಿವಿಲ್ಲ ಎಂದು ಟೀಕಿಸಿದರು.
ಸಿಬಿಐ ತನಿಖೆ ನಡೆಯುವ ವೇಳೆ ಅವರ ರಾಜೀನಾಮೆಗೆ ಆಗ್ರಹ ಮಾಡುತ್ತಿದ್ದಾರೆ. ಸಿಬಿಐ ವರದಿ ಬಹಿರಂಗವಾಗುವ ಮುನ್ನವೇ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗೆ ಇದೆಯಾ ಎಂದು ಪ್ರಶ್ನಿಸಿದ ಅವರು, ಹಾಗಾದರೆ, ಸಿಬಿಐ ತನಿಖೆಗೆ ಒಳಗಾಗಿರುವ ಬಿಜೆಪಿ ನಾಯಕರನ್ನು ಪಕ್ಷದಲ್ಲಿ ಯಾಕೆ ಇಟ್ಟುಕೊಂಡಿದ್ದಾರೆ. ಕೂಡಲೇ ಅವರನ್ನು ಪಕ್ಷದಿಂದ ಹೊರಗೆ ಹಾಕಲಿ ಎಂದು ಸವಾಲು ಹಾಕಿದರು.
ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡು ಜನಾರ್ಧನ ರೆಡ್ಡಿ ಜೊತೆ ವೇದಿಕೆ ಹಂಚಿಕೊಂಡಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಅಲ್ಲದೆ, ಸಚಿವರ ರಾಜೀನಾಮೆ ಕೇಳುವ ಅರ್ಹತೆಯೂ ಇಲ್ಲ ಎಂದ ಅವರು, ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಟೀಕೆ ಮಾಡುವ ಬರದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧವಾಗಿ ಕೀಳಾಗಿ ಮಾತನಾಡಿರುವುದು ಬಿಜೆಪಿ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ವಿಜಯ್, ಜಿ.ಜನಾರ್ಧನ, ಶೇಖರ್, ರಾಮಕೃಷ್ಣ, ಉಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







