ಮುಳುಗಿದ ಸರಕು ಸಾಗಾಟದ ಹಡಗು: ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಮಂಗಳೂರು, ಡಿ. 1: ಮಂಗಳೂರು ಧಕ್ಕೆಯಿಂದ ಲಕ್ಷದ್ವೀಪದ ಕಡೆಗೆ ತೆರಳಿದ್ದ ಎರಡು ಸರಕು ಸಾಗಾಟದ ಸಣ್ಣ ಹಡಗುಗಳ (ಮಂಜಿ) ಪೈಕಿ ಒಂದು ಹಡಗು ಕರವತ್ತಿ ದ್ವೀಪದ ಬಳಿ ಸಂಪೂರ್ಣ ಮುಳುಗಡೆಯಾಗಿದ್ದು, ಇನ್ನೊಂದು ಹಡಗು ಮುಳುಗಡೆಯ ಹಂತದಲ್ಲಿದೆ. ಎರಡೂ ಹಡಗುಗಳಲ್ಲಿ 13 ಮಂದಿ ಸಿಬ್ಬಂದಿಗಳಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಕಟ್ಟಡ ಸಾಮಗ್ರಿಗಳು ಹಾಗೂ ಆಹಾರ ಧಾನ್ಯಗಳನ್ನು ಹೊತ್ತು ಮಂಗಳವಾರ ಮಂಗಳೂರು ಧಕ್ಕೆಯಿಂದ ಲಕ್ಷದ್ವೀಪಕ್ಕೆ ಈ ಎರಡು ಹಡಗುಗಳು ಸಂಚರಿಸಿ ದ್ದವು. ಶುಕ್ರವಾರ ಸಂಜೆಯ ಹೊತ್ತಿಗೆ ಈ ಎರಡೂ ಹಡಗುಗಳು ಕರವತ್ತಿ ದ್ವೀಪಕ್ಕೆ ತಲುಪಿತ್ತಾದರೂ ಸರಕು ಖಾಲಿ ಮಾಡಲು ಕಾಯುತ್ತಿದ್ದ ಸಂದರ್ಭದಲ್ಲಿ ಚಂಡಮಾರುತ ಅಪ್ಪಳಿಸಿ ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ.
ಎರಡು ಹಡಗುಗಳ ಪೈಕಿ ಅಲ್ ನೂರ್ ಎಂಬ ಹಡಗು ಸಂಪೂರ್ಣ ಮುಳುಗಡೆಯಾಗಿದೆ. ಇದರಲ್ಲಿದ್ದ ಹಡಗಿನ ಮಾಲಕ ಸಹಿತ ಆರು ಮಂದಿ ಅಪಾಯದಲ್ಲಿ ದ್ದಾರೆ ಎಂದು ಹೇಳಲಾಗಿದೆ. ಸರಕು ತುಂಬಿದ ಇನ್ನೊಂದು ಹಡಗು ಭಾಗಶಃ ಮುಳುಗಡೆಯಾಗಿದ್ದು, ಇದರಲ್ಲಿ 7 ಮಂದಿ ಸಿಬ್ಬಂದಿಗಳಿದ್ದರೆಂದು ಮೂಲಗಳು ತಿಳಿಸಿವೆ.
ಸಿಬ್ಬಂದಿ ಅಪಾಯದಿಂದ ಪಾರು
ಅಲ್ ನೂರ್ ಹಾಗೂ ಮುಳುಗಡೆಯಾಗುತ್ತಿರುವ ಹಡಗುಗಳಲ್ಲಿದ್ದ ಎಲ್ಲಾ 13 ಸಿಬ್ಬಂದಿಗಳ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈಗಾಗಲೇ ಸ್ಥಳಕ್ಕೆ ಹೆಲಿಕಾಪ್ಟರ್ ಆಗಮಿಸಿದ್ದು, ಹೆಚ್ಚಿನ ಸಿಬ್ಬಂದಿಗಳ ರಕ್ಷಣೆ ಮಾಡಲಾಗಿದೆ. ಹೆಲಿಕಾಪ್ಟರ್‌ನಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಎಲ್ಲ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆಂದು ಮಾಹಿತಿ ಲಭಿಸಿದೆ ಎಂದು ಬಂದರು ಸಂರಕ್ಷಣಾ ಅಧಿಕಾರಿ ಗೌಸ್ ಅಲಿ ತಿಳಿಸಿದ್ದಾರೆ.
ಎರಡೂ ಹಡಗುಗಳು ಮಂಗಳವಾರ ಮಂಗಳೂರು ಬಂದರಿನಿಂದ ಸಂಚರಿಸಿದ್ದವು. ಕರವತ್ತಿ ದ್ವೀಪಕ್ಕೆ ತಲುಪಿದ್ದ ಈ ಎರಡೂ ಹಡಗುಗಳು ಸರಕು ಇಳಿಸಲು ಕಾಯುತ್ತಿದ್ದವು. ಇದೇ ಸಂದರ್ಭದಲ್ಲಿ ಗಾಳಿ ಬೀಸಿ ಈ ಅವಘಡ ಸಂಭವಿಸಿದೆ ಎಂದು ಮಾಹಿತಿ ಬಂದಿದೆ.
ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದು, ಸರಿಯಾಗಿ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಗೌಸ್ ಅಲಿ ಪತ್ರಿಕೆಗೆ ತಿಳಿಸಿದ್ದಾರೆ.







