ಕೃಷಿ ಸಂಶೋಧನಾ ಕೇಂದ್ರಕ್ಕೆ ಉಗ್ರರ ದಾಳಿ; 12 ಸಾವು

ಪೇಶಾವರ, ಡಿ. 1: ಪಾಕಿಸ್ತಾನದ ಪೇಶಾವರದಲ್ಲಿರುವ ಪ್ರಾಂತೀಯ ಸರಕಾರದ ಕೃಷಿ ಸಂಶೋಧನಾ ಕೇಂದ್ರಕ್ಕೆ ಶುಕ್ರವಾರ ದಾಳಿ ಮಾಡಿದ ಭಯೋತ್ಪಾದಕರು ಕನಿಷ್ಠ 12 ಮಂದಿಯನ್ನು ಕೊಂದಿದ್ದಾರೆ ಹಾಗೂ 35 ಮಂದಿ ಗಾಯಗೊಂಡಿದ್ದಾರೆ.
ಬಳಿಕ ಪೊಲೀಸರು ಮತ್ತು ಸೈನಿಕರು ನಡೆಸಿದ ಪ್ರತಿ ಕಾರ್ಯಾಚರಣೆಯಲ್ಲಿ ಮೂವರು ದಾಳಿಕೋರರು ಹತರಾದರು ಎಂದು ಪೊಲೀಸರು ತಿಳಿಸಿದರು.
ಈ ದಾಳಿಯ ಹೊಣೆಯನ್ನು ಪಾಕಿಸ್ತಾನಿ ತಾಲಿಬಾನ್ ವಹಿಸಿಕೊಂಡಿದೆ.
ಕೃಷಿ ಇಲಾಖೆಯ ಆವರಣದ ಪ್ರಧಾನ ದ್ವಾರದಲ್ಲಿ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕರು ಇಬ್ಬರು ಕಾವಲುಗಾರರು ಮತ್ತು ಇಬ್ಬರು ವಿದ್ಯಾರ್ಥಿಗಳನ್ನು ಗಾಯಗೊಳಿಸಿದರು ಎಂದು ಖೈಬರ್ ಪಖ್ತೂಂಖ್ವ ಪ್ರಾಂತದ ಪೊಲೀಸ್ ಮುಖ್ಯಸ್ಥರು ತಿಳಿಸಿದರು.
ಬಳಿಕ, ಬುರ್ಖಾ ಧರಿಸಿದ ಮೂವರು ಭಯೋತ್ಪಾದಕರು ರಿಕ್ಷಾವೊಂದರಲ್ಲಿ ಒಳಗಿನ ದ್ವಾರಕ್ಕೆ ಹೋಗಿ ಗುಂಡಿನ ದಾಳಿ ನಡೆಸಿದರು. ಬಳಿಕ ಪ್ರಧಾನ ಕಟ್ಟಡದೊಳಕ್ಕೆ ನುಗ್ಗಿದ ಉಗ್ರರು 12 ಮಂದಿಯನ್ನು ಕೊಂದರು ಹಾಗೂ ಡಝನ್‌ಗಟ್ಟಳೆ ಮಂದಿಯನ್ನು ಗಾಯಗೊಳಿಸಿದರು.
ಭಯೋತ್ಪಾದಕರು ಹಾಸ್ಟೆಲ್‌ಗಳಿಗೆ ನುಗ್ಗುವ ಮುನ್ನ ಭದ್ರತಾ ಪಡೆಗಳು ಅಲ್ಲಿನ ನಿವಾಸಿಗಳನ್ನು ಇತರೆಡೆಗಳಿಗೆ ಸ್ಥಳಾಂತರಿಸಿದರು.





