ಕರ್ನಾಟಕದ ದೊಡ್ಡ ಶಕ್ತಿ ಮಾನವಸಂಪನ್ಮೂಲ: ಸಚಿವ ದೇಶಪಾಂಡೆ
ಮೈಸೂರು,ಡಿ.1: ಕರ್ನಾಟಕ 'ಕೈಗಾರಿಕಾ ಸ್ನೇಹಿ ರಾಜ್ಯ'ವಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಬಣ್ಣಿಸಿದ್ದಾರೆ.
ಮೈಸೂರಿನ ಜೆಎಸ್ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ನಲ್ಲಿ ಶುಕ್ರವಾರ ಭಾರತೀಯ ಗುಣವೃತ್ತ ವೇದಿಕೆ, ಜೆಎಸ್ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾನಿಲಯ ವತಿಯಿಂದ ಏರ್ಪಡಿಸಲಾದ ಗುಣಮಟ್ಟದ ಪರಿಕಲ್ಪನೆಗಳ 31ನೆ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಹೇರಳವಾದ ಮಾನವ ಸಂಪನ್ಮೂಲವಿದ್ದು, ಇಲ್ಲಿನ ಕೈಗಾರಿಕೆಗಳ ಅಭಿವೃದ್ಧಿಯಾಗಬೇಕು, ಆಗುತ್ತಿದೆ. ಇಲ್ಲಿ ಸಣ್ಣ ಕೈಗಾರಿಕೆಯಿಂದ ಹಿಡಿದು ಬೃಹತ್ ಕೈಗಾರಿಕೆಗಳವರೆಗಿನ ಯೋಜನೆಗಳನ್ನೂ ರೂಪಿಸಲಾಗಿದೆ. ಕೈಗಾರಿಕೆಗಳ ಅಭಿವೃದ್ಧಿಗೆ ಎಲ್ಲ ರೀತಿಯಿಂದಲೂ ಕಾರ್ಯ ಕೈಗೊಳ್ಳಲಾಗುತ್ತಿದೆ. ಮೈಸೂರಿನ ಕೃಷ್ಣರಾಜ ಒಡೆಯರ್ ಇಲ್ಲಿನ ಅಭಿವೃದ್ಧಿ, ಕಲೆ, ವಾಸ್ತುಶಿಲ್ಪ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ ಅಭಿವೃದ್ಧಿ ಪಡಿಸಿದರು. ಅದೇ ರೀತಿ ಸುತ್ತೂರು ಶ್ರೀಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಗುಣಮಟ್ಟವನ್ನು ಹೆಚ್ಚಿಸಿದರು. ಕರ್ನಾಟಕದ ದೊಡ್ಡ ಶಕ್ತಿಯೆಂದರೆ ಮಾನವಸಂಪನ್ಮೂಲ. ಅವುಗಳ ಸದ್ಬಳಕೆಯಾಗಬೇಕು. ಪ್ರಥಮವಾಗಿ ರಾಜ್ಯದಲ್ಲಿ ಐಟಿ ಪಾಲಿಸಿ 97ರಲ್ಲಿ ಬಂತು. ಇದೀಗ ಇಲೆಕ್ಟ್ರಿಕಲ್ ವಾಹನ, ಬ್ಯಾಟರಿ ಎಲ್ಲವೂ ಇದೆ. ಇಲ್ಲಿನ ವಸ್ತುಗಳ ಗುಣಮಟ್ಟದ ಕುರಿತು ನಂಬಿಕೆಯಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕ ವಾಸು, ವೋಲ್ವೊ ಇಂಡಿಯಾದ ಆಡಳಿತ ನಿರ್ದೇಶಕ ಕಮಲ್ ಬಾಲಿ, ಕ್ಯೂಸಿಎಫ್ ಐನ ಸತೀಶ್ , ಜೆಎಸ್ ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ್ ಮಠ್ ಮತ್ತಿತರರು ಉಪಸ್ಥಿತರಿದ್ದರು.





