ಸಂಸದರಿಂದ ರಾ.ಹೆ. 169 ನಿರ್ಲಕ್ಷ: ಐವನ್ ಆರೋಪ
ಮಂಗಳೂರು, ಡಿ.1: ಮಂಗಳೂರು-ಕಾರ್ಕಳ ಮುಖಾಂತರ ಹಾದು ಹೋಗುವ ರಾ.ಹೆ.169ನ್ನು ಸಂಸದ ನಳಿನ್ ಕುಮಾರ್ ಕಟೀಲ್ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜ ಆರೋಪಿಸಿದ್ದಾರೆ.
ಮನಪಾ ಕಟ್ಟಡದಲ್ಲಿರುವ ತನ್ನ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಹೆದ್ದಾರಿಯಾಗಿದ್ದ ಈ ರಸ್ತೆಯನ್ನು 20 ವರ್ಷದ ಹಿಂದೆಯೇ ರಾಷ್ಟ್ರೀಯ ೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ರಾ.ಹೆ. ಪ್ರಾಧಿಕಾರವು ಇದಕ್ಕೆ ಸಂಬಂಧಿಸಿದಂತೆ ಬೋರ್ಡ್ ಬದಲಾಯಿಸಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ಈ ಹೆದ್ದಾರಿಯಲ್ಲಿ ಸಿಗುವ 94 ವರ್ಷಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ಕಟ್ಟಲ್ಪಟ್ಟ ಗುರುಪುರ ಸೇತುವೆಯು ಶಿಥಿಲಾವಸ್ಥೆಗೆ ತಲುಪಿದೆ. ವಾಹನಗಳ ಓಡಾಟಕ್ಕೆ ಇದು ಆಯೋಗ್ಯ ಎಂದು ಎನ್‌ಐಟಿಕೆ ತಜ್ಞರು ಕೂಡ ವರದಿ ನೀಡಿದ್ದಾರೆ. ಆದಾಗ್ಯೂ ಈ ಹೆದ್ದಾರಿಯ ಅಭಿವೃದ್ಧಿಗೆ ಸಂಸದರು ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಹೆದ್ದಾರಿಯ ಹೊಂಡ ಗುಂಡಿಯಿಂದ ಹಲವು ಮಂದಿಯ ಪ್ರಾಣಕ್ಕೆ ಅಪಾಯವಾಗಿದೆ. ಹೆದ್ದಾರಿಯ ಅಭಿವೃದ್ಧಿಗೆ ಇನ್ನೂ ಭೂ ಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ಹೆದ್ದಾರಿಯನ್ನು ಚತುಷ್ಪಥಗೊಳಿಸಲು ಕನಿಷ್ಠ 2 ವರ್ಷ ಬೇಕಾಗಿದೆ. ಆವರೆಗೆ ಇದರ ದುರಸ್ತಿಯಾಗಬೇಕಿದೆ. ರಾ.ಹೆ. ಪ್ರಾಧಿಕಾರವು ಇದರ ದುರಸ್ತಿಗೆ 17.50 ಕೋ.ರೂ.ನ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿದೆ. ಸಂಸದರು ಅದರ ಬಿಡುಗಡೆಗೆ ಇಚ್ಛಾಶಕ್ತಿ ವ್ಯಕ್ತಪಡಿಸುತ್ತಿಲ್ಲ. ೇವಲ ಭಾಷಣದಿಂದ ಮಾತ್ರ ಹೊಟ್ಟೆ ತುಂಬುತ್ತದೆ ಎಂದು ಸಂಸದರು ಭಾವಿಸಿದಂತಿದೆ ಎಂದು ಐವನ್ ಡಿಸೋಜ ನುಡಿದರು.
*ಬೀಡಿ ಉದ್ಯಮಕ್ಕೆ ಪರ್ಯಾಯ ವ್ಯವಸ್ಥೆ: ದ.ಕ.ಜಿಲ್ಲೆಯಲ್ಲಿ ಬೀಡಿ ಉದ್ಯಮಕ್ಕೆ ಹೊಡೆತ ಬೀಳುತ್ತಿವೆ. ಮಹಿಳಾ ಕಾರ್ಮಿಕರೇ ಇದರಲ್ಲಿ ಅಧಿಕ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದು, ಉದ್ಯಮ ಅವನತಿಯತ್ತ ಸಾಗಿರುವುದರಿಂದ ಮಹಿಳೆಯರು ಕಂಗಾಲಾಗಿದ್ದಾರೆ. ಈ ನಿಟ್ಟಿನಲ್ಲಿ ಗಾರ್ಮೆಂಟ್ಸ್ ಉದ್ಯಮವನ್ನು ಸ್ಥಾಪಿಸಲು ಅಧಿವೇಶನದಲ್ಲಿ ಆಗ್ರಹಿಸಿದ್ದು,ಇದಕ್ಕೆ ಜವಳಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದ ಐವನ್ ಡಿಸೋಜ, ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಕನಿಷ್ಠ 100 ಎಕರೆ ಜಮೀನು ಕಾಯ್ದಿರಿಸಿ ಗಾರ್ಮೆಂಟ್ಸ್ ಉದ್ಯಮ ಸ್ಥಾಪನೆಯಲ್ಲದೆ, ಮಹಿಳೆಯರಿಗೆ ಈ ಬಗ್ಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪಿಸವೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಸತೀಶ್ ಪೆಂಗಲ್, ಭಾಸ್ಕರ ರಾವ್, ಹನೀಫ್ ಮತ್ತಿತರರು ಉಪಸ್ಥಿತರಿದ್ದರು.







