ಕೆಜೆಪಿ ಬಿಜೆಪಿಯೊಂದಿಗೆ ವಿಲೀನವಾಗಲ್ಲ: ಪ್ರಸನ್ನ ಕುಮಾರ್
ಬೆಂಗಳೂರು, ಡಿ.1: ಕರ್ನಾಟಕ ಜನತಾ ಪಕ್ಷ, ಭಾರತೀಯ ಜನತಾ ಪಕ್ಷದೊಂದಿಗೆ ಯಾವುದೇ ಕಾರಣಕ್ಕೂ ವಿಲೀನವಾಗುವುದಿಲ್ಲ. ನಾವೇ ಎಲ್ಲ ಕ್ಷೇತ್ರಗಳಲ್ಲಿ ಚುನಾವಣೆ ಸ್ಪರ್ಧೆ ಮಾಡುತ್ತೇವೆ ಎಂದು ಕೆಜೆಪಿ ಅಧ್ಯಕ್ಷ ಪದ್ಮನಾಭ್ ಪ್ರಸನ್ನ ಕುಮಾರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ನಗರದ ಪಪ್ಪಾರೆಡ್ಡಿ ಪಾಳ್ಯದಲ್ಲಿ ನೂತನ ಕಚೇರಿ ಉದ್ಘಾಟನೆ ಹಾಗೂ ಚುನಾವಣಾ ಸಿದ್ಧತಾ ತಯಾರಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ಪೀಳಿಗೆಯ ಯುವಕರಿಗಾಗಿ ಈ ಪಕ್ಷವನ್ನು ಕಟ್ಟಲಾಗಿದೆ. ಹೀಗಾಗಿ, ಇದನ್ನು ಯಾವುದೇ ಪಕ್ಷದೊಂದಿಗೆ ವಿಲೀನ ಮಾಡಲು ಮುಂದಾಗುವುದಿಲ್ಲ ಎಂದರು.
ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಯಾವುದೇ ಪಕ್ಷಗಳು ಅಭಿವೃದ್ಧಿ ಪರವಾಗಿಲ್ಲ ಎಂದು ಟೀಕೆ ಮಾಡಿದ ಅವರು, ಜನರನ್ನು ಸಂಘಟಿಸುವ ನಿಟ್ಟಿನಲ್ಲಿ ಇಂದಿನಿಂದ ರಾಜ್ಯ ಪ್ರವಾಸ ಕೈಗೊಳ್ಳಲಾಗುತ್ತಿದೆ. ಜತೆಗೆ, ಸ್ವಾತಂತ್ರ ಹೋರಾಟಗಾರರು, ಸಾಹಿತಿಗಳು, ಬುದ್ಧಿಜೀವಿಗಳ ಜೊತೆಗೂಡಿ ಪಕ್ಷದ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ವಿವರಿಸಿದರು.
ಕೆಜೆಪಿ ಕಾರ್ಯಾಧ್ಯಕ್ಷ ಬ್ರಹ್ಮೇಂದ್ರನ್ ಮಾತನಾಡಿ, ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದು ಹೇಳಿದರು.







