ಕರಾವಳಿಯಾದ್ಯಂತ ಮೀಲಾದುನ್ನಬಿ ಸಂಭ್ರಮ

ಮಂಗಳೂರು, ಡಿ.1: ಪ್ರವಾದಿ ಮುಹಮ್ಮದ್ ಪೈಗಂಬರ್‌ರ 1492ನೆ ಜನ್ಮದಿನವನ್ನು ಶುಕ್ರವಾರ ಕರಾವಳಿಯ ಸುನ್ನಿ ಮುಸ್ಲಿಮರು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು.
ಬೆಳಗ್ಗಿನಿಂದಲೇ ವಿದ್ಯಾರ್ಥಿಗಳಿಂದ ಮಸೀದಿ-ಮದ್ರಸಗಳ ವಠಾರದಲ್ಲಿ ಪ್ರವಾದಿಯ ಮದ್‌ಹ್ ಗೀತೆಗಳು, ಮೆರವಣಿಗೆ, ವಾಹನ ರ್ಯಾಲಿ, ವೌಲಿದ್ ಮಜ್ಲಿಸ್, ಕೂಟು ಝಿಯಾರತ್ ಇತ್ಯಾದಿ ನಡೆಯಿತು. ಮದ್ರಸದ ಪ್ರಾಥಮಿಕ ಮತ್ತು ಪ್ರೌಢ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು.
ಮಸೀದಿ-ಮದ್ರಸಗಳ ಸುತ್ತಮುತ್ತ ಶುಭ ಕೋರುವ ಬ್ಯಾನರ್, ಬಂಟಿಂಗ್ಸ್ ಇತ್ಯಾದಿ ರಾರಾಜಿಸುತ್ತಿತ್ತು. ಅಲ್ಲಲ್ಲಿ ಸಿಹಿತಿಂಡಿ, ತಂಪು ಪಾನೀಯ ವಿತರಿಸಿ ಸಂಭ್ರಮಿಸಿದರು. ಮಸೀದಿಗಳಲ್ಲಿ ಮಾಂಸದ ಪದಾರ್ಥದೊಂದಿಗೆ ರೊಟ್ಟಿ, ತುಪ್ಪದೂಟ ಬಡಿಸಲಾಯಿತು.
ಮಂಗಳೂರಿನ ಬಂದರ್, ಕಂದುಕ, ಕುದ್ರೋಳಿ ಆಸುಪಾಸಿನ ಮದ್ರಸ ವಿದ್ಯಾರ್ಥಿಗಳು ದಫ್‌ನೊಂದಿಗೆ ಆಕರ್ಷಕ ಮೆರವಣಿಗೆ ನಡೆಸಿ ಅಲ್ ಮದ್ರಸತುಲ್ ಅಝ್‌ಹರಿಯ್ಯ ವಠಾರದಲ್ಲಿ ಜಮಾಯಿಸಿದರು. ಬಳಿಕ ಅಲ್ಲಿ ಮಕ್ಕಳ ಸ್ಪರ್ಧಾ ಕಾರ್ಯಕ್ರಮ ಜರಗಿತು. ಉಳಿದಂತೆ ಬೆಂಗರೆ, ತಣ್ಣೀರುಬಾವಿ, ಜೆಪ್ಪು, ಬೋಳಾರ, ಕಂಕನಾಡಿ, ಅಡ್ಯಾರ್ ಕಣ್ಣೂರು, ಮಾರಿಪಳ್ಳ, ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರ, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ, ಕೆ.ಸಿ.ರೋಡ್, ಸೋಮೇಶ್ವರ, ಕೋಟೆಕಾರ್, ದೇರಳಕಟ್ಟೆ, ಕುತ್ತಾರ್, ಕೊಣಾಜೆ, ನಾಟೆಕಲ್, ಕಿನ್ಯ, ಮಂಜನಾಡಿ, ಮುಡಿಪು, ಮತ್ತಿತರ ಕಡೆ ಮೀಲಾದುನ್ನಬಿ ಆಚರಿಸಲಾಯಿತು.
ಮಂಗಳೂರು ಸೋಶಿಯಲ್ ಸರ್ವಿಸ್ ಸೆಂಟರ್ ವತಿಯಿಂದ ನಗರದ ಕೇಂದ್ರ ಜುಮಾ ಮಸೀದಿಯಿಂದ ಬಾವುಟಗುಡ್ಡೆಯ ಈದ್ಗಾ ಮಸೀದಿಯವರೆಗೆ ಸಂಜೆ ನಡೆದ ಮೀಲಾದ್ ರ್ಯಾಲಿಗೆ ಕೇಂದ್ರ ಜುಮಾ ಮಸೀದಿ ಆವರಣದಲ್ಲಿ ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಮೀಲಾದುನ್ನಬಿ ಆಚರಣೆಯು ಶಾಂತಿ-ಸೌಹಾರ್ದಕ್ಕೆ ಪೂರಕವಾಗಲಿ. ಪ್ರವಾದಿಯ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಈ ಸಂದರ್ಭ ಮಾಜಿ ಮೇಯರ್ ಕೆ. ಅಶ್ರಫ್, ಕೇಂದ್ರ ಜುಮಾ ಮಸೀದಿಯ ಖತೀಬ್ ಸ್ವದಖತುಲ್ಲಾ ಫೈಝಿ, ಹಾಜಿ ಮುಹಮ್ಮದ್ ಹನೀಫ್, ಹಾಜಿ ಬಾಷಾ ತಂಙಳ್, ಅದ್ದು ಹಾಜಿ, ಸೋಶಿಯಲ್ ಸರ್ವಿಸ್ ಸೆಂಟರ್ ಪದಾಧಿಕಾರಿಗಳಾದ ನಝೀರ್ ಅಹ್ಮದ್, ಕೆ. ಬಶೀರ್, ಮುನವ್ವರ್, ಖಲೀಲ್ ಇಬ್ರಾಹೀಂ, ಇಬ್ರಾಹೀಂ ಅಹ್ಮದ್, ಮುಹಮ್ಮದ್ ಅಶ್ರಫ್ ಬಿ., ಇಬ್ರಾಹೀಂ, ಅಸ್ಲಂ, ಸದಸ್ಯರಾದ ಮುಹಮ್ಮದ್ ಶರೀಫ್, ಎಂ.ಎ. ಮನ್ಸೂರ್, ಸಿದ್ದೀಕ್ ಕೋಟೆಕಣಿ, ನೌಫಾಲ್, ಜಾವಿದ್, ಸಿರಾಜ್ ಹಾಗೂ ಸ್ಥಳೀಯ ಮಸೀದಿಯ ಅಧ್ಯಕ್ಷರಾದ ಬಿ. ಹಾರಿಸ್, ಹಾಜಿ ಅಬ್ದುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.
ಅದಲ್ಲದೆ ಬಂದರ್ ಫ್ರೆಂಡ್ಸ್, ಗಲ್ಲಿ ಗೈಸ್, ಹರಿ ಕ್ಯಾನ್, ಬಂದರ ಯಂಗ್ ಫ್ರೆಂಡ್ಸ್, ಫೈಸ್ಕ್ರೂಪ್, ಟಿ.ಸಿ.ವೆಲ್‌ಫೇರ್ ಫೌಂಡೇಶನ್, ಕಸೈಗಲ್ಲಿ ಫ್ರೆಂಡ್ಸ್, ಕಂಡತ್‌ಪಳ್ಳಿ ಫ್ರೆಂಡ್ಸ್, ಸಾಮ್ನಾ ಗ್ರೂಪ್, ಟಿ.ಸಿ.ಫ್ರೆಂಡ್ಸ್, ಕುದ್ರೋಳಿ ಫ್ರೆಂಡ್ಸ್, ಬೆಂಗ್ರೆ ಫ್ರೆಂಡ್ಸ್, ಕಂದಕ್ ಫ್ರೆಂಡ್ಸ್‌ನ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.
ಮೀಲಾದುನ್ನೆಬಿ ಪ್ರಯುಕ್ತ ಕೊಟ್ಟಾರದ ಸ್ನೇಹದೀಪದ ಎಚ್‌ಐವಿ ಪೀಡಿತ ಮಕ್ಕಳಿಗೆ ಸಂಘಟನೆಯ ವತಿಯಿಂದ ಅನ್ನದಾನ ಮಾಡಲಾಯಿತು.







