ಬಾಕಿ ಮೊತ್ತ ಪಾವತಿಗಾಗಿ ಭಾರತವನ್ನು ನ್ಯಾಯಾಲಯಕ್ಕೆಳೆದ ನಿಸ್ಸಾನ್

ಹೊಸದಿಲ್ಲಿ, ಡಿ.1: ಪಾವತಿಯಾಗದ ಸರಕಾರಿ ಪ್ರೋತ್ಸಾಹ ಧನದ ತಕರಾರಿನಲ್ಲಿ 770 ಮಿಲಿಯನ್ ಡಾಲರ್ ಪರಿಹಾರವನ್ನು ಕೋರಿ ಜಪಾನೀಸ್ ಸಂಸ್ಥೆ ನಿಸ್ಸಾನ್ ಮೋಟರ್ಸ್ ಭಾರತದ ವಿರುದ್ಧ ಅಂತಾರಾಷ್ಟ್ರೀಯ ದಾವೆಯನ್ನು ಹೂಡಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ರೈಟರ್ಸ್ ವರದಿ ಮಾಡಿದೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಗೆ ಕಳುಹಿಸಿದ್ದ ಲೀಗಲ್ ನೊಟೀಸ್‌ನಲ್ಲಿ ನಿಸ್ಸಾನ್ ಸಂಸ್ಥೆಯು, ಕಾರು ನಿರ್ಮಾಣ ಘಟಕವನ್ನು ತೆರೆಯಲು 2008ರಲ್ಲಿ ಮಾಡಲಾದ ಒಪ್ಪಂದದ ಪ್ರಕಾರ ತಮಿಳುನಾಡು ಸರಕಾರ ಪ್ರೋತ್ಸಾಹ ಧನವನ್ನು ನೀಡಲು ವಿಫಲವಾಗಿದೆ. 2015ರಲ್ಲಿ ಬಾಕಿಯುಳಿದಿರುವ ಈ ಮೊತ್ತವನ್ನು ಪಾವತಿಸುವಂತೆ ನಿಸ್ಸಾನ್ ಸಂಸ್ಥೆ ರಾಜ್ಯದ ಅಧಿಕಾರಿಗಳಿಗೆ ನಿರಂತರ ಮನವಿ ಮಾಡಿದರೂ ಅದನ್ನು ನಿರ್ಲಕ್ಷಿಸಲಾಗಿದೆ ಮತ್ತು ಸಂಸ್ಥೆಯ ಮುಖ್ಯಸ್ಥ ಕಾರ್ಲೋಸ್ ಗೋಸ್ನ್ ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿಗೆ ಈ ಬಗ್ಗೆ ದೂರು ನೀಡಿ ಮಧ್ಯಸ್ಥಿಕೆಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನೊಟೀಸ್‌ನಲ್ಲಿ ತಿಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
2016ರಲ್ಲಿ ನಿಸ್ಸಾನ್ ಸಂಸ್ಥೆಯ ವಕೀಲರು ನೊಟೀಸ್ ಕಳುಹಿಸಿದ ನಂತರ ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳು ಮತ್ತು ನಿಸ್ಸಾನ್ ಸಂಸ್ಥೆಯ ಪ್ರತಿನಿಧಿಗಳ ಮಧ್ಯೆ ಹಲವು ಸುತ್ತಿನ ಮಾತುಕತೆಗಳು ನಡೆದಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕೇಂದ್ರದ ಹಲವು ಸಚಿವಾಲಯಗಳ ಅಧಿಕಾರಿಗಳು ಬಾಕಿ ಮೊತ್ತವನ್ನು ಶೀಘ್ರದಲ್ಲಿ ಪಾವತಿಸಲಾಗುವುದು ಎಂಬ ಭರವಸೆ ನೀಡಿ ಕಾನೂನು ಹೋರಾಟ ನಡೆಸದಂತೆ ಮನವಿ ಮಾಡಿಕೊಂಡಿದ್ದರು. ಆದರೆ ಆಗಸ್ಟ್‌ನಲ್ಲಿ ನಿಸ್ಸಾನ್ ಈ ಪ್ರಕರಣದಲ್ಲಿ ಮಧ್ಯಸ್ಥರನ್ನು ನೇಮಿಸುವಂತೆ ಆಗ್ರಹಿಸಿತ್ತು ಎಂದು ತಿಳಿಸಿರುವ ಅಧಿಕಾರಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯಲ್ಲಿ ಈ ಪ್ರಕರಣದ ಮೊದಲ ವಿಚಾರಣೆಯು ಡಿಸೆಂಬರ್ ಮಧ್ಯಭಾಗದಲ್ಲಿ ನಡೆಯಲಿರುವುದಾಗಿ ತಿಳಿಸಿದ್ದಾರೆ.
ಒಂದು ಸಮಾಧಾನಕರ ಪರಿಹಾರಕ್ಕಾಗಿ ಸಂಸ್ಥೆಯು ಭಾರತ ಸರಕಾರದ ಜೊತೆ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿರುವ ನಿಸ್ಸಾನ್ ಸಂಸ್ಥೆಯ ವಕ್ತಾರ ಈ ಬಗ್ಗೆ ಹೆಚ್ಚಿನ ವಿವರಣೆಯನ್ನು ನೀಡಲು ನಿರಾಕರಿಸಿದ್ದಾರೆ. ಸರಕಾರವು ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯನ್ನು ಪಡೆಯದೆ ಈ ವಿವಾದವನ್ನು ಬಗೆಹರಿಸಲು ಬಯಸಿತ್ತು ಎಂದು ಹೇಳಿಕೊಂಡಿರುವ ತಮಿಳುನಾಡು ಸರಕಾರದ ಹಿರಿಯ ಅಧಿಕಾರಿ ಪ್ರೋತ್ಸಾಹ ಧನಕ್ಕೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಯಾಗಿಲ್ಲ ಮತ್ತು ಈ ವಿವಾದವನ್ನು ಶೀಘ್ರ ಪರಿಹರಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ವಿವರಣೆ ಕೋರಿ ಕಳುಹಿಸಲಾದ ಇಮೇಲ್‌ಗೆ ಪ್ರಧಾನಿಯವರ ಕಚೇರಿ ಸ್ಪಂದಿಸಿಲ್ಲ. ಹಿಮ್ಮುಖ ತೆರಿಗೆ ನೀತಿ, ಪಾವತಿ ವಿವಾದ ಹೀಗೆ ಹಲವು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹೂಡಿಕೆದಾರರು ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯನ್ನು ಕೋರಿರುವ ಹಲವು ಪ್ರಕರಣಗಳ ಸಾಲಿಗೆ ಜಪಾನ್ ಜೊತೆ ನಡೆಸಿದ ಸಮಗ್ರ ಆರ್ಥಿಕ ಜೊತೆಗಾರಿಕಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ನಿಸ್ಸಾನ್ ಭಾರತದ ವಿರುದ್ಧ ಮಾಡಿರುವ ಆರೋಪ ಹೊಸ ಸೇರ್ಪಡೆಯಾಗಿದೆ.
ಭಾರತದ ವಿರುದ್ಧ ಒಟ್ಟಾರೆ ಇಪ್ಪತ್ತು ಪ್ರಕರಣಗಳು ಬಾಕಿಯುಳಿದಿದ್ದು ಇದು ಒಂದು ದೇಶದ ವಿರುದ್ಧ ಹೂಡಲಾಗಿರುವ ಅತ್ಯಂತ ಹೆಚ್ಚು ದಾವೆಯಾಗಿದೆ. ನಿಸ್ಸಾನ್ ಮತ್ತು ತಮಿಳುನಾಡು ಸರಕಾರದ ಮಧ್ಯೆ ಉಂಟಾಗಿರುವ ಈ ವಿವಾದವು ಭಾರತದಲ್ಲಿ ಕಂಪೆನಿಗಳು ಎದುರಿಸುವ ಸವಾಲುಗಳತ್ತ ಬೆಳಕು ಚೆಲ್ಲುವ ಜೊತೆಗೆ ಹೇಗೆ ಸ್ಥಳೀಯ ವಿವಾದಗಳು ಮೋದಿ ಸರಕಾರದ ವಿದೇಶಿ ಬಂಡವಾಳ ಆಕರ್ಷಿಸುವ ಮತ್ತು ಹೊಸ ಉದ್ಯೋಗ ಸೃಷ್ಟಿಸುವ ಪ್ರಯತ್ನಕ್ಕೆ ತಡೆಯೊಡ್ಡುತ್ತವೆ ಎಂಬುದನ್ನೂ ಎತ್ತಿ ತೋರಿಸಿದೆ.







