ಪ್ರವಾದಿ ಕ್ಷಮೆ, ಸಹನೆಯ ಮೂಲಕ ಜನಮನವನ್ನು ಗೆದ್ದವರು-ಪೂಕೋಯ ತಂಙಳ್
ಮಿಲಾದ್ ಸಮಾವೇಶ, ಸೌಹಾರ್ದ ವಾಹನ ರ್ಯಾಲಿ

ಪುತ್ತೂರು, ಡಿ. 1: ಲೋಕದಲ್ಲಿ ಅನ್ಯಾಯ ಅನಾಚಾರ, ಮೌಢ್ಯತೆಗಳು ಹೆಚ್ಚಾದಾಗ ಪ್ರವಾದಿಗಳ ಆಗಮನವಾಯಿತು. ಲಕ್ಷಾಂತರ ಪ್ರವಾದಿಗಳಲ್ಲಿ ಕೊನೆಯ ಪ್ರವಾದಿಯಾದ ಮಹಮ್ಮದ್ ಪೈಗಂಬರ್ ಅವರು ತನ್ನ ಕ್ಷಮೆ, ಸಹನೆಯ ಮೂಲಕ ಜನಮನವನ್ನು ಗೆದ್ದವರು ಎಂದು ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಹೇಳಿದರು.
ಅವರು ಮೀಲಾದುನ್ನಬಿ ಸಮಿತಿ ಪುತ್ತೂರು ತಾಲೂಕು ಮತ್ತು ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ವತಿಯಿಂದ ಪುತ್ತೂರಿನ ಕಿಲ್ಲೆ ಮೈದಾನದ ಮರ್‌ಹೂಂ ಅಬ್ಬಾಸ್ ಹಾಜಿ ಬೊಳ್ವಾರ್ ವೇದಿಕೆಯಲ್ಲಿ ಶುಕ್ರವಾರ ರಾತ್ರಿ ನಡೆದ 24ನೇ ವರ್ಷದ ಮಿಲಾದ್ ಸಮಾವೇಶ ಹಾಗೂ ಸೌಹಾರ್ದ ವಾಹನ ರ್ಯಾಲಿಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾನವ ಲೋಕದ ಉನ್ನತೀಕರಣವೇ ಪ್ರವಾದಿ ಆಗಮನದ ಮುಖ್ಯ ಉದ್ದೇಶವಾಗಿತ್ತು. ಹಲವಾರು ಪವಾಡಗಳ ಮೂಲಕ ಜನರನ್ನು ಆಕರ್ಷಿಸಿದ ಪ್ರವಾದಿ ಅವರು ಓರ್ವ ಅನಕ್ಷರಸ್ಥರಾಗಿದ್ದರು. ನಿರಕ್ಷಕರ ಕುಕ್ಷಿಯಾದ ಪ್ರವಾದಿ ಅವರ ಸಾಹಿತ್ಯಾತ್ಮಕ ವಚನಗಳನ್ನು ಕೇಳಿದ ಜನರು ಅವರನ್ನು ಒಪ್ಪಿಕೊಂಡರು. ಲೋಕದಾದ್ಯಂತ ಪ್ರವಾದಿ ಅನುಚರರು ಸತ್ಯಸಂದೇಶವನ್ನು ಪ್ರಸಾರ ಮಾಡಿ ಎಲ್ಲೆಡೆ ಇಸ್ಲಾಂ ಧರ್ಮ ಸ್ಥಾಪನೆಗೆ ಕಾರಣರಾದರು ಎಂದರು.
ಸತ್ಯ ಮತ್ತು ಶಾಂತಿಯ ಸಂದೇಶ ಸಾರಿದ ಇಸ್ಲಾಂ ಧರ್ಮ ಇದೀಗ ತನ್ನ ಮೂಲ ಸ್ವರೂಪವನ್ನು ಮರೆತು ಸಾಗುತ್ತಿರುವುವುದು ಕೆಲವು ಕಡೆಗಳಲ್ಲಿ ಕಂಡು ಬರುತ್ತಿದೆ. ಇದನ್ನು ಯುವ ಸಮುದಾಯ ತಡೆಯಬೇಕು. ನಮ್ಮ ವರ್ತನೆಯು ಎಲ್ಲರಿಗೂ ಮಾದರಿಯಾಗಬೇಕು. ಧರ್ಮ ಪಂಡಿತರು ರಚಿಸಿರುವ ಧಾರ್ಮಿಕ ಚಿಂತನೆಗಳಿರುವ ಪುಸ್ತಕಗಳನ್ನು ಓದುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರವಾದಿ ವಚನವನ್ನು ಪಾಲಿಸಬೇಕು ಎಂದ ಅವರು ಎಲ್ಲಾ ಮಕ್ಕಳಿಗೂ ಲೌಕಿಕ ಮತ್ತು ಧಾರ್ಮಿಕ ಶಿಕ್ಷಣ ನೀಡುವ ಬಗ್ಗೆ ಸಮುದಾಯ ಗಮನ ಹರಿಸಬೇಕು. ಶ್ರೀಮಂತರು ಬಡವರಿಗೆ ದಾನವನ್ನು ನೀಡಿ ಅವರ ಬದುಕಿಗೆ ಬೆಳಕಾಗಬೇಕು ಎಂದರು.
ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜ್‌ನ ಉಪಾಧ್ಯಕ್ಷ ಕೆ.ಬಿ. ಖಾಸಿಂ ಹಾಜಿ ಮಿತ್ತೂರು ಅಧ್ಯಕ್ಷತೆ ವಹಿಸಿದ್ದರು. ಅಮೀರ್ ಬಾಖವಿ ತಿರುವನಂತಪುರ, ಶಾಫಿ ಸಹದಿ ಬೆಂಗಳೂರು ಮತ್ತು ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಅನ್ವರ್ ಸಾದಾತ್ ಗೂಡಿನ ಬಳಿ ಮುಖ್ಯ ಪ್ರಭಾಷಣ ನೀಡಿದರು. ದ.ಕ.ಜಿಲ್ಲಾ ವಕ್ಫ್ ಸಮಿತಿ ಸದಸ್ಯ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಯು. ಅಬ್ದುಲ್ಲ ಹಾಜಿ, ಪ್ರಧಾನ ಕಾರ್ಯದರ್ಶಿ ಎಲ್.ಟಿ. ರಝಾಕ್ ಹಾಜಿ, ಉದ್ಯಮಿ ಹಾಜಿ ಜಮಾಲುದ್ದೀನ್, ಹುಸೈನಾರ್, ಹಾಜಿ ಪುತ್ತುಬಾವ, ಕೆ.ಎಂ. ಅಬ್ದುಲ್ ರಝಾಕ್ ಕೂಟತ್ತಾನ, ಎಸ್.ಎಂ. ತಂಙಳ್ ಕಬಕ, ಉಮ್ಮರ್ ದಾರಿಮಿ ಸಾಲ್ಮರ, ಅಬ್ದುಲ್ ಹಮೀದ್ ಹನೀಫಿ ದರ್ಬೆ, ಉಮ್ಮರ್ ಯಮಾನಿ, ಯು. ಮಹಮ್ಮದ್ ಹಾಜಿ, ಅಬ್ದುಲ್ ಹಮೀದ್ ಸೋಂಪಾಡಿ, ಈದ್ ಮಿಲಾದ್ ಸಮಿತಿ ಮಾಜಿ ಅಧ್ಯಕ್ಷ ಅಶ್ರಫ್ ಬಾವು, ವಿ.ಕೆ. ಶರೀಫ್, ಇಬ್ರಾಹಿಂ ಗೋಳಿಕಟ್ಟೆ, ಅಬೂಬಕ್ಕರ್ ಮುಲಾರ್, ಯಾಕೂಬ್ ಮುಲಾರ್, ಯೂಸುಫ್ ಗೌಸಿಯಾ, ಈದ್ ಮಿಲಾದ್ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್, ಪ್ರಧಾನ ಕಾರ್ಯದರ್ಶಿ ನೌಶದ್ ಬೊಳ್ವಾರ್, ಖಜಾಂಜಿ ಗಫೂರ್ ಹಾಜಿ, ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಸಂಚಾಲಕ ಎಂ.ಪಿ. ಅಬೂಬಕ್ಕರ್, ಕಾರ್ಯದರ್ಶಿ ಪುತ್ತು ಶೇಟ್, ಖಜಾಂಜಿ ರಹಿಮಾನ್ ಯುನಿಕ್ ಮತ್ತಿತರರು ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಯುವಜನ ಪರಿಷತ್ ಮಾಜಿ ಅಧ್ಯಕ್ಷ ಅಶ್ರಫ್ ಹಾಜಿ ಕಲ್ಲೇಗ ಸ್ವಾಗತಿಸಿದರು. ಉಪಾಧ್ಯಕ್ಷ ಮಹಮ್ಮದ್ ಶರೀಫ್ ಸಾಲ್ಮರ ವಂದಿಸಿದರು. ಸಿದ್ದೀಕ್ ಬೀಟಿಗೆ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಕಬಕದಿಂದ ಕಿಲ್ಲೆ ಮೈದಾನದ ತನಕ ಸೌಹಾರ್ಧ ವಾಹನ ರ್ಯಾಲಿ ನಡೆಯಿತು. ರ್ಯಾಲಿಯನ್ನು ಉದ್ಯಮಿ ಪಿ.ಬಿ. ಹಸನ್ ಹಾಜಿ ಉದ್ಘಾಟಿಸಿದರು. ಎಸ್. ಎಂ. ಮಹಮ್ಮದ್ ತಂಙಳ್ ಕಬಕ ದುವಾ ನಡೆಸಿದರು. ಮೊಯ್ದುಕುಂಞಿ ಕಬಕ ಅತಿಥಿಯಾಗಿ ಉಪಸ್ಥಿತರಿದ್ದರು. ರ್ಯಾಲಿಯು ಕಬಕದಿಂದ ಹೊರಟು ಮುಖ್ಯ ರಸ್ತೆಯಲ್ಲಿ ಸಾಗಿ ಬೈಪಾಸ್ ಮೂಲಕ ಕಿಲ್ಲೆ ಮೈದಾನಕ್ಕೆ ಆಗಮಿಸಿತು.







