ರಸ್ತೆ ಅಪಘಾತ: ನಾಲ್ವರು ಕೆಎಸ್‌ಆರ್‌ಪಿ ಪೊಲೀಸರ ಸಹಿತ ಐವರಿಗೆ ಗಾಯ
ಮಂಗಳೂರು, ಡಿ. 1: ನಗರದ ಪಂಪ್‌ವೆಲ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ನಡೆದ ರಸ್ತೆ ಅಪಘಾತದಲ್ಲಿ ನಾಲ್ವರು ಕೆಎಸ್‌ಆರ್‌ಪಿ ಪೊಲೀಸರು ಸಹಿತ ಐವರು ಗಾಯಗೊಂಡಿದ್ದಾರೆ.
ಕೆಎಸ್‌ಆರ್‌ಪಿ ಬಸ್ ಚಾಲಕ ನಾಗೇಂದ್ರ ಕೊಳಂಬಕರ್, ಸಿಬ್ಬಂದಿಗಳಾದ ಸುಧಾಕರ್ ಅವರು ಗಂಭೀರ ಹಾಗೂ ಮಹೇಶ್ ನಾಕ್, ಮಾರುತಿ ಬೆಲ್ಗುಡಿ, ಲಾರಿ ಚಾಲಕ ನಿಸಾರ್ ಸಾಮಾನ್ಯ ಸ್ವರೂಪದಲ್ಲಿ ಗಾಯಗೊಂದ್ದು, ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಾಳುಗಳ ಪೈಕಿ ನಾಗೇಂದ್ರ ಅವರ ಬಲ ಮೊಣ ಕಾಲು ಗಂಟಿನ ಮೂಳೆ ಮುರಿತಕ್ಕೊಳಗಾಗಿದೆ. ಸುಧಾಕರ ಎಂಬವರಿಗೆ ಮೂಗಿಗೆ ಹಾಗೂ ಎದೆಯ ಭಾಗಕ್ಕೆ, ಮಾರುತಿ ಅವರಿಗೆ ಹಣೆಗೆ ಗಾಯವಾಗಿದೆ ಎಂದು ಹೇಳಲಾಗಿದೆ.
ಮಿಲಾದುನ್ನಬಿ ಬಂದೋಬಸ್ತ್ ಕರ್ತವ್ಯಕ್ಕಾಗಿ ಕಂಕನಾಡಿ ನಗರ ಠಾಣೆಯಲ್ಲಿ ವರದಿ ಮಾಡಿಕೊಳ್ಳಲು ಕೊಣಾಜೆಯ ಕೆಎಸ್‌ಆರ್‌ಪಿ 7ನೆ ಬೆಟಾಲಿಯನ್‌ನಿಂದ ಇಲಾಖೆಯ ಬಸ್‌ನಲ್ಲಿ ಸುಮಾರು 25ರಷ್ಟು ಮಂದಿ ಸಿಬ್ಬಂದಿಗಳು ಬರುತ್ತಿದ್ದಾಗ, ಮಂಗಳೂರಿನಿಂದ ಕೇರಳದ ಕಡೆಗೆ ಹೋಗುತ್ತಿದ್ದ ಲಾರಿ ಪರಸ್ಪರ ಢಿಕ್ಕಿಯಾಗಿದೆ. ಪರಿಣಾಮ ಎರಡೂ ವಾಹನಗಳ ಎದುರು ಭಾಗ ಜಖಂಗೊಂಡಿವೆ. ಈ ಬಗ್ಗೆ ಕಂಕನಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





