ಪಾಕಿಸ್ತಾನದಲ್ಲಿ ತೀವ್ರವಾದಿಗಳ ಕೈಮೇಲು: ಅಮೆರಿಕ ಕಳವಳ

ವಾಶಿಂಗ್ಟನ್, ಡಿ. 1: ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳು ಕೊನೆಗೊಂಡ ರೀತಿಯಿಂದ ಅಮೆರಿಕದ ಡೊನಾಲ್ಡ್ ಟ್ರಂಪ್ ಸರಕಾರ ಕಳವಳಗೊಂಡಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪರಿಸ್ಥಿತಿಯ ಮೇಲೆ, ಅದರಲ್ಲೂ ಮುಖ್ಯವಾಗಿ ಪ್ರತಿಭಟನೆಯಲ್ಲಿ ಸೇನೆಯ ಪಾತ್ರದ ಬಗ್ಗೆ ಅಮೆರಿಕ ನಿಗಾ ಇಡುವುದು ಎಂದು ಅವರು ಹೇಳಿದರು.
‘‘ಸೇನೆ ಮತ್ತು ಕೆಲವು ತೀವ್ರವಾದಿ ಪಕ್ಷಗಳ ನಡುವೆ ಪರಸ್ಪರ ಸಹಾಯ ಮಾಡುವ ಬಾಂಧವ್ಯ ಇರುವುದನ್ನು ನಾವು ನೋಡಿದ್ದೇವೆ. ನಾವು ಅದರ ಮೇಲೆ ನಿಗಾ ಇಟ್ಟಿದ್ದೇವೆ ಹಾಗೂ ಅದರಲ್ಲಿ ಸೇನೆ ಯಾವ ಪಾತ್ರವನ್ನು ವಹಿಸಿದೆ ಎನ್ನುವುದನ್ನು ಪತ್ತೆಹಚ್ಚುತ್ತೇವೆ. ಈ ಪ್ರತಿಭಟನೆಗಳು ಕೊನೆಗೊಂಡ ರೀತಿಯು ಪಾಕಿಸ್ತಾನದಲ್ಲಿನ ತೀವ್ರವಾದಿಗಳು ಮತ್ತು ಉಗ್ರವಾದಕ್ಕೆ ಬೆಂಬಲ ನೀಡುವಂತಿದೆ ಎಂಬ ಕಳವಳ ನಮ್ಮದಾಗಿದೆ’’ ಎಂದು ಪಿಟಿಐಯೊಂದಿಗೆ ಮಾತನಾಡಿದ ಅಧಿಕಾರಿ ಹೇಳಿದರು.
ಪಾಕಿಸ್ತಾನದಲ್ಲಿ ನಾಗರಿಕ ಸರಕಾರ ಮತ್ತು ಸೇನೆಯ ನಡುವಿನ ಸಂಘರ್ಷದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ ಅವರು, ‘‘ಈಗಿನ ಮಟ್ಟಿಗೆ ಹೇಳುವುದಾದರೆ, ಅಲ್ಲಿನ ಸರಕಾರ ತುಂಬಾ ದುರ್ಬಲವಾಗಿದೆ. ಇತ್ತೀಚಿನ ಪ್ರತಿಭಟನೆಗಳಿಂದ ಇದು ಸಾಬೀತಾಗಿದೆ’’ ಎಂದರು.





