ಜರ್ಮನಿ ಜಯಭೇರಿ;ಭಾರತ-ಆಸ್ಟ್ರೇಲಿಯ ಪಂದ್ಯ ಡ್ರಾ
ವಿಶ್ವ ಹಾಕಿ ಲೀಗ್ ಫೈನಲ್

ಭುವನೇಶ್ವರ, ಡಿ.1: ವಿಶ್ವ ಹಾಕಿ ಲೀಗ್‌ನ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಜರ್ಮನಿ ತಂಡ ಗೆಲುವಿನ ಆರಂಭ ಪಡೆದರೆ, ಆತಿಥೇಯ ಭಾರತ ತಂಡ ಹಾಲಿ ಆಸ್ಟ್ರೇಲಿಯ ವಿರುದ್ಧ ಪಂದ್ಯವನ್ನು ಡ್ರಾಗೊಳಿಸುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಿತು.
ಕಳಿಂಗಾ ಸ್ಟೇಡಿಯಂನಲ್ಲಿ ಕಿಕ್ಕಿರಿದ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯ ತಂಡಗಳು ಸಮಬಲದ ಹೋರಾಟ ನೀಡಿ ತಲಾ 1 ಗೋಲು ಬಾರಿಸಿದ್ದವು. ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ಗೋಲು ಬಾರಿಸಲು ವಿಫಲವಾದವು. ಪಂದ್ಯ ರೋಚಕ ಡ್ರಾಗೊಂಡ ಹಿನ್ನೆಲೆಯಲ್ಲಿ ಎರಡೂ ತಂಡಗಳು ಅಂಕವನ್ನು ಹಂಚಿಕೊಂಡವು.
20ನೇ ನಿಮಿಷದಲ್ಲಿ ನಾಯಕ ಮನ್‌ಪ್ರೀತ್ ಸಿಂಗ್ ನೀಡಿದ ಪಾಸ್ ನೆರವಿನಿಂದ ಗೋಲು ಬಾರಿಸಿದ ಮನ್‌ದೀಪ್ ಸಿಂಗ್ ಭಾರತದ ಗೋಲು ಖಾತೆ ತೆರೆದು 1-0 ಮುನ್ನಡೆ ಒದಗಿಸಿಕೊಟ್ಟರು. ಆದರೆ ಭಾರತದ ಮುನ್ನಡೆಯ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. 21ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಿದ ಆಸ್ಟ್ರೇಲಿಯದ ಜೆರೆಮಿ ಹೇವಾರ್ಡ್ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು. ಉಭಯ ತಂಡಗಳು ಮೊದಲಾರ್ಧ ಕೊನೆಗೊಂಡಾಗ 1-1 ರಿಂದ ಸಮಬಲ ಸಾಧಿಸಿದ್ದವು. ದ್ವಿತೀಯಾರ್ಧದಲ್ಲಿ ಭಾರತ ನಾಲ್ಕು ಪೆನಾಲ್ಟಿ ಕಾರ್ನರ್ ಹಾಗೂ ಆಸ್ಟ್ರೇಲಿಯ ಐದು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆದರೂ ಅದನ್ನು ಗೋಲಾಗಿ ಪರಿವರ್ತಿಸಲು ವಿಫಲವಾದವು. ಮನ್‌ದೀಪ್ ಕೊನೆಯ ಕ್ಷಣದಲ್ಲೂ ಗೋಲು ಹೊಡೆಯಲು ವಿಫಲಯತ್ನ ನಡೆಸಿದರು. ಭಾರತ ಶನಿವಾರ ಇಂಗ್ಲೆಂಡ್ ವಿರುದ್ಧ ಎರಡನೇ ಪಂದ್ಯ ಆಡಲಿದೆ. ಭಾರತದ ನಾಯಕ ಮನ್‌ಪ್ರೀತ್ ಸಿಂಗ್ ಆಸ್ಟ್ರೇಲಿಯ ವಿರುದ್ಧ ಆಡುವ ಮೂಲಕ 200ನೇ ಅಂತಾರಾಷ್ಟ್ರೀಯ ಪಂದ್ಯ ಆಡಿದ ಸಾಧನೆ ಮಾಡಿದರು. ಶುಕ್ರವಾರ ನಡೆದ ಮತ್ತೊಂದು ಪಂದ್ಯದಲ್ಲಿ ಜರ್ಮನಿ ತಂಡ ಇಂಗ್ಲೆಂಡ್‌ನ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿತು. ಜರ್ಮನಿಯ ಪರ ಮ್ಯಾಟ್ಸ್ ಗ್ರಾಮ್‌ಬಕ್(19ನೇ ನಿಮಿಷ) ಹಾಗೂ ಕ್ರಿಸ್ಟೊಫರ್ ರುರ್(25ನೇ ನಿಮಿಷ) ತಲಾ ಒಂದು ಗೋಲು ಬಾರಿಸಿ ತಂಡದ ಗೆಲುವಿಗೆ ನೆರವಾದರು. ಈ ಎರಡು ಗೋಲುಗಳು ಪಂದ್ಯದ ಎರಡನೇ ಕ್ವಾರ್ಟರ್‌ನಲ್ಲಿ ದಾಖಲಾಗಿದ್ದವು.







