ಮೈಸೂರು ರಾಜರೇ ನನ್ನ ಐಡಿಯಾ ಒಪ್ಪಿದ್ದು ಸಂತೋಷ : ಉಪೇಂದ್ರ

ಚಾಮರಾಜನಗರ,ಡಿ.02: ಪ್ರಜಾಕಿಯ ಪಕ್ಷದ ಸಂಸ್ಥಾಪಕ ಹಾಗೂ ಚಲನ ಚಿತ್ರ ರಂಗದ ರಿಯಲ್ ಸ್ಟಾರ್ ಉಪೇಂದ್ರ ಸದ್ದು ಗದ್ದಲವಿಲ್ಲದೆ ಚಾಮರಾಜನಗರ ಜಿಲ್ಲೆಯಲ್ಲಿ ತಮ್ಮ ಪಕ್ಷದ ಪ್ರಚಾರವನ್ನು ಮಾಡುತ್ತಾ, ಜನಸಂಪರ್ಕ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಮತ್ತು ಅಗತನಗೌಡನಹಳ್ಳಿಯಲ್ಲಿ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದ ಬಳಿಕ ಯಾವ ಮುನ್ಸೂಚನೆಯನ್ನು ನೀಡದೆ ಚಾಮರಾಜನಗರಕ್ಕೆ ಆಗಮಿಸಿದ ಉಪೇಂದ್ರ ತಮ್ಮ ಆಪ್ತ ಬಳಗವನ್ನು ಸಂಪರ್ಕಿಸಿ ಪ್ರಜಾಕೀಯ ಪಕ್ಷದ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು.
ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಉಪೇಂದ್ರ, ರಾಜಕಾರಣ ಒಂದು ವ್ಯವಹಾರವಾಗಿ ಬಿಟ್ಟಿದೆ. ಅದನ್ನು ಬದಲಾವಣೆ ಮಾಡುವ ಸಲುವಾಗಿ ತಾವು ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾಗಿ ಹೇಳಿದರು.
ಕೇವಲ ಹಣವಿದ್ದವರು ಹಾಗೂ ಜಾತಿ ಮತ್ತು ತೋಳ್ಬಲವಿದ್ದರು ಮಾತ್ರ ಚುನಾವಣೆ ರಾಜಕಾರಣ ಮಾಡಬಹುದು ಎನ್ನುವ ಸಿದ್ದಾಂತಕ್ಕೆ ನಾಂದಿ ಹಾಕುವ ಸಲುವಾಗಿ ಹಣವಿಲ್ಲದೆ ಅಂದ್ರೆ ಕ್ಯಾಶ್ ಲೆಸ್ ಪಾರ್ಟ್ ಮಾಡಿದ್ದೇನೆ ಎಂದು ಹೇಳಿದರು.
ಭಾರತ ದೇಶಕ್ಕೆ ಅಂಬೇಡ್ಕರ್‍ರವರು ಅತ್ಯುತ್ತಮ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ, ಅವರು ಹೇಳಿದಂತೆ ಕಾಲಕ್ಕೆ ತಕ್ಕಂತೆ ಸಮಾಜಕ್ಕೆ ಅನುಗುಣವಾಗಿ ಸಂವಿಧಾನದಲ್ಲಿ ಮಾರ್ಪಡು ಮಾಡಿ ಎಂದಿದ್ದಾರೆ. ಅದೇ ರೀತಿಯಾಗಿ ಅಧಿಕಾರದಲ್ಲಿರುವ ರಾಜಕಾರಣಿಗಳು ಸಂವಿಧಾನವನ್ನು ಮಾರ್ಪಾಡು ಮಾಡುತ್ತಿದ್ದಾರೆ ಎಂದು ಹೇಳಿದರು.
ತಮಗೆ ಹತ್ತು ವರ್ಷದಿಂದ ಹಲವಾರು ಪಕ್ಷಗಳಿಂದ ಆಹ್ವಾನ ಬಂದಿತ್ತು, ಆದ್ರೆ ಸಮಯ ಬಂದಾಗ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದೆ ಅದೇ ರೀತಿಯಾಗಿ ಪ್ರಸ್ತುತ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡಿದ್ದೇನೆ ಎಂದರು.
ಇದೇ ವೇಳೆ ತಮ್ಮ ನೆಚ್ಚಿನ ನಾಯಕ ನಟ ಆಗಮಿಸಿದ್ದನ್ನು ತಿಳಿದ ಉಪೇಂದ್ರ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
ತಾನು ಅಸ್ಥಿತ್ವಕ್ಕೆ ತಂದಿರುವ ಪ್ರಜಾಕೀಯ ಪಕ್ಷದ ಬಗ್ಗೆ ಮೈಸೂರು ರಾಜ ಮನೆತನದ ಶ್ರೀಕಂಠದತ್ತ ಚಾಮರಾಜ ಯದುವೀರ ಮಹಾರಾಜರು ಒಳ್ಳೇಯ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಸ್ವಾಗತಿಸಿದ ಉಪೇಂದ್ರ ತಮ್ಮ ಐಡಿಯಾಗಳು ಮಹಾರಾಜರಿಗೆ ಹಿಡಿಸಿದೆ ಎಂದು ಹೇಳಿದರು.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಅಚ್ಗಾಳ್ ಯಾತ್ರಿ ನಿವಾಸ್‍ದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಉಪೇಂದ್ರ, ಜನರಿಗೆ ತಮ್ಮ ಪಕ್ಷದ ಸಿದ್ದಾಂತವನ್ನು ಹೇಳಿ ಅವರು ಇಷ್ಟ ಪಟ್ಟರೆ ಪ್ರಜಾಕೀಯಕ್ಕೆ ಬೆಂಬಲ ನೀಡುವರು ಎಂದು ವಿವರಿಸಿದರು.







