‘ಮೈ ಜಾಬ್’ ವಿಶಿಷ್ಟ ಮೊಬೈಲ್ ಆ್ಯಪ್ ಬಿಡುಗಡೆ

ಮಂಗಳೂರು, ಡಿ. 2: ತಜ್ಞರ, ಪರಿಣಿತರ ನೆರವಿನಿಂದ ಯುವಜನರೇ ರೂಪಿಸಿ, ಯುವಜನರೇ ಮುನ್ನಡೆಸುತ್ತಿರುವ ವಿಶಿಷ್ಟ ಬಗೆಯ ಆಂದೋಲನ ‘ಉದ್ಯೋಗಕ್ಕೇ ಓಟು’ ವತಿಯಿಂದ ‘ಮೈ ಜಾಬ್’ ಎಂಬ ವಿಶಿಷ್ಟ ಮೊಬೈಲ್ ಆ್ಯಪ್ ಅನ್ನು ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಹಾಗೂ ಉದ್ಯೋಗಕ್ಕಾಗಿ ಯುವ ಜನರು ವೇದಿಕೆಯ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದುಗೋಷ್ಠಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭ ಮಾತನಾಡಿದ ವೇದಿಕೆಯ ರಾಜ್ಯ ಸಂಚಾಲಕ ಮುತ್ತುರಾಜ್, ನಿರುದ್ಯೋಗದಿಂದಾಗಿ ಇಂದು ಯುವಜನತೆ ತತ್ತರಿಸಿದ್ದಾರೆ. ಈಗಾಗಲೇ ರಾಜ್ಯದ ಮೂರೂ ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯಲು ಯಾತ್ರೆ ಆರಂಭಿಸಿದ್ದಾರೆ. ಆದರೆ ಯುವಜನರಿಗೆ ಉದ್ಯೋಗ ನೀಡಲು ಮಾತ್ರ ಈ ಪಕ್ಷಗಳು ಮುಂದಾಗುತ್ತಿಲ್ಲ. ಈ ನಿಟ್ಟಿನಲ್ಲಿ ನಾಡಿನ ಯುವಜನರ ಪ್ರತಿ ಮೊಬೈಲ್ನಲ್ಲೂ ಅರಿವನ್ನು ಮೂಡಿಸುವ ಕೆಲಸವನ್ನು ವೇದಿಕೆ ಮಾಡಲು ಮುಂದಾಗಿದೆ ಎಂದರು.
ರಾಜ್ಯದ ಮತದಾರರ ಪೈಕಿ ಶೇ.52ರಷ್ಟು ಯುವಜನರಿದ್ದಾರೆ. ಇದು ನಿರುದ್ಯೋಗಿಗಳ ಹೊಟ್ಟೆಪಾಡಿನ ಪ್ರಶ್ನೆ ಅಲ್ಲ. ದೇಶದ ಅಭಿವೃದ್ಧಿಯ ಪ್ರಶ್ನೆ. ಆದರೆ ನಿರುದ್ಯೋಗ ದಿನೇ ದಿನೇ ಹೆಚ್ಚುತ್ತಲಿದೆ. ನಮ್ಮದು ಕೇವಲ ಟೀಕೆ ಮಾಡುವ ಅಥವಾ ಕೆಸರೆರಚುವ ಆಂದೋಲನವಲ್ಲ. ಉದ್ಯೋಗ ಸೃಷ್ಟಿಯ ಪರ್ಯಾಯ ಮಾದರಿಯನ್ನು ಸರಕಾರದ ಮುಂದಿಡಲಿದ್ದೇವೆ. ಅದಕ್ಕಾಗಿ ತಜ್ಞರ, ಪರಿಣಿತರ ನೆರವನ್ನು ಪಡೆದುಕೊಳ್ಳುತ್ತಿದ್ದೇವೆ. ಮುಂದಿನ 5 ವರ್ಷಗಳಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿಯ ನೀಲನಕ್ಷೆಯನ್ನು ಜಾರಿಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಮುತ್ತುರಾಜ್ ನುಡಿದರು.
‘ಮೈ ಜಾಬ್’ ಆ್ಯಪ್‌ನಲ್ಲಿ ಉದ್ಯೋಗಗಳ ಕುರಿತು ಮಾಹಿತಿ, ನೆರವು, ಅರಿವು ನೀಡಲಾಗುತ್ತದೆ. ಅದರ ಮೂಲಕ ರಚನಾತ್ಮಕ ಕೆಲಸ ಮಾಡಲು ಸಹಾಯಕವಾಗಲಿದೆ. ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗಳಿಗೆ ಇಲ್ಲಿಂದಲೇ ನೇರವಾಗಿ ಇ-ಮೇಲ್ ಮುಖಾಂತರ ಮನವಿ ಕಳಿಸಬಹುದು. ತಮ್ಮ ವಿವರಗಳನ್ನು ತುಂಬಿದವರು ನಿರಂತರವಾಗಿ ಮಾಹಿತಿಯನ್ನು ಪಡೆಯುತ್ತಿರಬಹುದು. ಉದ್ಯೋಗಗಳ ಕುರಿತು ಸಾಕಷ್ಟು ಮಾಹಿತಿ ಇಲ್ಲಿ ಸಿಗುತ್ತದೆ. ಅದರ ಜೊತೆಗೆ ಸ್ಕಾಲರ್‌ಶಿಪ್, ಸ್ವ-ಉದ್ಯೋಗದ ಕುರಿತ ಮಾಹಿತಿಯೂ ಇಲ್ಲಿ ಲಭ್ಯ. ಇದರಿಂದಲೇ ಹೆಲ್ಪ್ಲೈನ್‌ಗೆ ಕರೆ ಮಾಡಬಹುದು. ಈ ಆಂದೋಲನದ ಸದಸ್ಯರೂ ಆಗಬಹುದು. ಕಾರ್ಯಕರ್ತರೂ ಆಗಬಹುದು. ಯುವಜನರು ಈ ಆ್ಯಪ್‌ನ ಮುಖಾಂತರ ನೂರಾರು ಬಗೆಯ ಉದ್ಯೋಗಗಳ ಕುರಿತು, ಸ್ವಯಂ ಉದ್ಯೋಗಗಳ ಕುರಿತು, ಸ್ಕಾಲರ್‌ಶಿಪ್‌ಗಳ ಕುರಿತು ಮಾಹಿತಿ ಪಡೆದುಕೊಳ್ಳಬಹುದು ಎಂದು ಮುತ್ತುರಾಜ್ ನುಡಿದರು.
ಇದು ಬೃಹತ್ ಆಂದೋಲನವಾಗಬೇಕು ಎಂಬುದು ವೇದಿಕೆಯ ಆಶಯವಾಗಿದೆ. ಇದಕ್ಕೆ ಈ ಮೊಬೈಲ್ ಆ್ಯಪ್ ನೆರವಾಗಲಿದೆ. ಇದನ್ನು ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ 19 ವರ್ಷ ವಯಸ್ಸಿನ ವಿಜಯ್ ಮತ್ತು ಅನುದೀಪ್ ರೂಪಿಸಿಕೊಟ್ಟಿದ್ದಾರೆ. ಆ್ಯಪ್‌ನ ಲಿಂಕ್‌ಗಾಗಿ ಮೊ.ಸಂ: 8287214422ಕ್ಕೆ ಮಿಸ್ಡ್‌ಕಾಲ್ ಕೊಡಬಹುದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಾಲಿಡಾರಿಟಿ ಯೂತ್‌ಮೂವ್‌ಮೆಂಟ್‌ನ ಕಾಸಿಮ್ ಕೆ., ಅಬ್ದುಲ್ ಕಬೀರ್ ಉಪಸ್ಥಿತರಿದ್ದರು.







