ಪ್ರೊ.ಮ್ಯಾಥ್ಯೂ ನೈನಾನ್‌ಗೆ ‘ಅಲೆವೂರು ಗ್ರೂಪ್’ ಪ್ರಶಸ್ತಿ ಪ್ರದಾನ

ಉಡುಪಿ, ಡಿ. 2: ಅಲೆವೂರು ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಬ್ರಹ್ಮಾವರ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್‌ನ ನಿರ್ದೇಶಕ ಪ್ರೊ.ಮ್ಯಾಥ್ಯೂ ಸಿ.ನೈನಾನ್‌ಗೆ ‘ಅಲೆವೂರು ಗ್ರೂಪ್’ ಪ್ರಸ್ತಿಯನ್ನು ಪ್ರದಾನ ಮಾಡಲಾಯಿತು.
ಇಂದು ನಡೆದ ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ಮ್ಯಾಥ್ಯೂ ಸಿ.ನೈನಾನ್, ಪೋಷಕರು ಮುಖ್ಯವಾಗಿ ತಮ್ಮ ಮಕ್ಕಳಿಗೆ ಶಿಸ್ತು ಕಲಿಸಬೇಕು. ಇಲ್ಲದಿದ್ದರೆ ಮುಂದೆ ಆ ಮಕ್ಕಳು ತಂದೆ ತಾಯಿಗಳಿಗೆ ಗೌರವ ನೀಡದೆ ಅವರ ನಿಯಂತ್ರಣಕ್ಕೆ ಸಿಗದ ರೀತಿಯಲ್ಲಿ ಬೆಳೆಯುತ್ತಾರೆ ಎಂದರು.
ಇಂದು ಎಲ್ಲವನ್ನು ಮಕ್ಕಳೇ ತೀರ್ಮಾನ ಮಾಡುತ್ತಿದ್ದಾರೆ. ಅವರು ಕೇಳಿದನ್ನು ಸರಬರಾಜು ಮಾಡುವವರು ಮಾತ್ರ ಪೋಷಕರಾಗಿದ್ದಾರೆ. ಇದು ಅಪಾಯ ಕಾರಿ ಬೆಳವಣಿಗೆಯಾಗಿದೆ. ಇಂದು ಪೋಷಕರೇ ದೊಡ್ಡ ಸಮಸ್ಯೆಯೇ ಹೊರತು ಮಕ್ಕಳಲ್ಲ. ಮಕ್ಕಳಿಗೆ ಪೋಷಕರು ಹೊಡೆಯಬಾರದು. ಇದರಿಂದ ಅವರಲ್ಲಿ ಹಿಂಸೆಯ ಮನೋಭಾವ ಬೆಳೆಯುತ್ತದೆ ಎಂದು ಅವರು ಹೇಳಿದರು.
ಶಾಸಕ ವಿನಯ ಕುಮಾರ್ ಸೊರಕೆ ಮಾತನಾಡಿ, ವಿದ್ಯಾ ಸಂಸ್ಥೆಗಳು ಮಕ್ಕಳ ವ್ಯಕ್ತಿತ್ವ ರೂಪಿಸುವ ಕೇಂದ್ರ. ತಮ್ಮ ಮಕ್ಕಳನ್ನು ಕೇವಲ ವೈದ್ಯರು, ಇಂಜಿನಿಯರ್ ಗಳನ್ನಾಗಿ ಮಾಡಿದೆ ಐಎಎಸ್, ಐಪಿಎಸ್‌ಗಳಾಗುವ ನಿಟ್ಟಿನಲ್ಲಿ ಯುಪಿಎಸ್‌ಸಿ ಪರೀಕ್ಷೆಗಳನ್ನು ಬರೆಯುವಂತೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಲಿಟ್ಲ್‌ರಾಕ್‌ನ ಲಾಲಿ ಎ.ಮ್ಯಾಥ್ಯೂ, ಉಡುಪಿ ಜಿಪಂ ಮುಖ್ಯ ಯೋಜನಾಧಿಕಾರಿ ಎ.ಶ್ರೀನಿವಾಸ ರಾವ್, ಸಂಸ್ಥೆಯ ಅಧ್ಯಕ್ಷ ಗಣಪತಿ ಕಿಣಿ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ದಿನೇಶ್ ಕಿಣಿ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು.
ಶಾಲಾ ಪ್ರಾಂಶುಪಾಲೆ ರೂಪಾ ಡಿ.ಕಿಣಿ ವರದಿ ವಾಚಿಸಿದರು. ಹರೀಶ್ ಕಿಣಿ ಸ್ವಾಗತಿಸಿದರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.







