ಸಾರಿಗೆ ನೌಕರಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯಾಗಲಿ : ಕೆ.ಆರ್.ರಮೇಶ್‌ಕುಮಾರ್

ಬೆಂಗಳೂರು, ಡಿ.2: ಕೆಎಸ್ಸಾರ್ಟಿಸಿ ಸಿಬ್ಬಂದಿಗಳು ಹಾಗೂ ಕುಟುಂಬ ವರ್ಗದ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಸಾರಿಗೆ ಇಲಾಖೆ ರಾಜ್ಯದ ಹಲವೆಡೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲು ಮುಂದಾಗಬೇಕು ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್ ಆಶಿಸಿದ್ದಾರೆ.
ಶನಿವಾರ ಬಿಎಂಟಿಸಿ, ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಹಾಗೂ ಬಿಬಿಎಂಪಿ ವತಿಯಿಂದ ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ‘ಇಂದಿರಾ ಟ್ರಾನ್ಸಿಟ್ ಕ್ಲಿನಿಕ್’ ಉದ್ಘಾಟನೆ ಹಾಗೂ ಮೆಟ್ರೊ ರೈಲು ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಬಿಎಂಟಿಸಿ ಬಸ್‌ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾರಿಗೆ ಇಲಾಖೆಯ ನೌಕರರು ದಕ್ಷತೆ ಹಾಗೂ ನೆಮ್ಮದಿಯಿಂದ ಕೆಲಸ ಮಾಡುವಂತೆ ನೋಡಿಕೊಳ್ಳಬೇಕಾದದ್ದು ಇಲಾಖೆಯ ಜವಾಬ್ದಾರಿ. ನೌಕರರಿಗೆ ಹಾಗೂ ಅವರ ಕುಟುಂಬಕ್ಕೆ ಆರೋಗ್ಯದಲ್ಲಿ ಏನೇ ಸಮಸ್ಯೆಯಾದರು ಉಚಿತ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆ ಸಿಗುವಂತಾದರೆ ಸಾರಿಗೆ ನೌಕರರು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ರೆಸಿಡೆನ್ಸಿ ಶಾಲೆ ನಿರ್ಮಾಣವಾಗಲಿ: ಯಾವುದೇ ಕುಟುಂಬಕ್ಕೆ ಬಹುಮುಖ್ಯವಾಗಿ ಬೇಕಿರುವುದು ಆರೋಗ್ಯ ಮತ್ತು ಶಿಕ್ಷಣವಾಗಿದೆ. ಅವೆರಡನ್ನು ಸಾರಿಗೆ ಇಲಾಖೆಯ ನೌಕರರಿಗೆ ಉಚಿತವಾಗಿ ಒದಗಿಸಲು ಸಾರಿಗೆ ಇಲಾಖೆಗೆ ಸಾಧ್ಯವಿದೆ. ಹೀಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸ್ಥಾಪನೆಗೆ ಅಗತ್ಯವಾದ ನೆರವನ್ನು ನೀಡಲು ನಾನು ಸಿದ್ಧನಿದ್ದೇನೆ. ಇನ್ನು ಶಿಕ್ಷಣ ಇಲಾಖೆಯ ಜೊತೆ ಮಾತನಾಡಿ ರೆಸಿಡೆನ್ಸಿ ಶಾಲೆಗಳ ನಿರ್ಮಾಣಕ್ಕೆ ಅನುಮತಿಗಳನ್ನು ಪಡೆದುಕೊಂಡು ಕೂಡಲೆ ಪ್ರಾರಂಭಿಸಿ ಎಂದು ಅವರು ಹೇಳಿದರು.
ಅಗತ್ಯವಿರುವೆಡೆ ಇಂದಿರಾ ಕ್ಲಿನಿಕ್: 30ವರ್ಷಗಳ ಹಿಂದೆ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬಸ್ ನಿಲ್ದಾಣಗಳಲ್ಲಿ ಬಂದು ಬಸ್‌ಗಾಗಿ ಕಾಯುತ್ತಾ ಇರುತ್ತಿದ್ದೆ. ಈ ಸಂದರ್ಭದಲ್ಲಿ ಪ್ರಯಾಣಿಕರು ಹಸಿವು, ಆಯಾಸದಿಂದ ಬಸ್‌ನಿಲ್ದಾಣಗಳಲ್ಲಿಯೇ ಕುಳಿತಿರುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಹೀಗಾಗಿ ದೂರದ ಊರುಗಳಿಂದ ಬರುವ ಪ್ರಯಾಣಿಕರ ಆರೋಗ್ಯವನ್ನು ನೋಡಿಕೊಳ್ಳುವುದು ಸರಕಾರದ ಕರ್ತವ್ಯವೆಂದು ಅವರು ಹೇಳಿದರು.
ಇಂದಿರಾ ಕ್ಲಿನಿಕ್ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗುವುದಿಲ್ಲ. ಪ್ರತಿ ಜಿಲ್ಲೆಯ ಮುಖ್ಯ ಬಸ್ ನಿಲ್ದಾಣಗಳಲ್ಲಿ ಇಂದಿರಾ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗುವುದು. ಆ ಮೂಲಕ ಪ್ರಯಾಣಿಕರಿಗೆ ಉಚಿತವಾಗಿ ಪ್ರಾಥಮಿಕವಾಗಿ ಚಿಕಿತ್ಸೆಯನ್ನು ನೀಡಲಾಗುವುದು. ಇದಕ್ಕೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಸಾರಿಗೆ ಇಲಾಖೆಗೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್ ತಿಳಿಸಿದ್ದಾರೆ.
ಮಹಿಳೆಯರಿಗಾಗಿ ಪಿಂಕ್ ಬಸ್: ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ನಗರದಲ್ಲಿ ಮಹಿಳೆಯರ ಸುರಕ್ಷಿತೆಯನ್ನು ಕಾಪಾಡುವ ಉದ್ದೇಶದಿಂದ ಮಹಿಳೆಯರಿಗಾಗಿ ಪ್ರತ್ಯೇಕವಾದ ಪಿಂಕ್ ಬಸ್‌ಗಳನ್ನು ಚಾಲನೆಗೆ ತರುವ ಸಂಬಂಧ ಚಿಂತನೆ ನಡೆಯುತ್ತಿವೆ. ಹಾಗೂ ಹಾಲಿ ಇರುವ ಬಸ್‌ಗಳಲ್ಲಿ ಮಹಿಳಾ ಸೀಟುಗಳನ್ನು ಪಿಂಕ್ ಬಣ್ಣಕ್ಕೆ ಪರಿವರ್ತಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ 95ನೆ ಬಸ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 300ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಬಿಎಂಟಿಸಿ ಅಧ್ಯಕ್ಷ ನಾಗರಾಜ್‌ಯಾದವ್, ಉಪಾಧ್ಯಕ್ಷ ಗೋವಿಂದರಾಜು, ಪಾಲಿಕೆ ಸದಸ್ಯೆ ಲತಾ ಕುವರ್ ರಾಥೋಡ್ ಮತ್ತಿತರರಿದ್ದರು.
‘ಇಂದಿರಾ’ ವ್ಯಕ್ತಿಯಲ್ಲ, ಆಲೋಚನೆ
ಮಾಜಿ ಪ್ರಧಾನಿ ಇಂದಿರಾಗಾಂಧಿ ಕೇವಲ ವ್ಯಕ್ತಿಮಾತ್ರವಾಗಿರದೆ, ಜನಪರ, ತಳಸಮುದಾಯ ಹಾಗೂ ಮಹಿಳಾಪರವಾದ ಆಲೋಚನೆಯಾಗಿ ರೂಪಿತವಾಗಿದ್ದರು. ಅತ್ಯಂತ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದ್ದ ಅವರು, ಎಲ್ಲ ಸಮುದಾಯದ ಜನತೆಯು ರಾಜಕೀಯದ ಮೂಲಕ ವಿಧಾನಸೌಧ ಪ್ರವೇಶ ಪಡೆಯಬೇಕೆಂದು ಬಯಸಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಅವರ ಹೆಸರಿಗೆ ಮಂಕು ಕವಿದಿದೆ. ಇದನ್ನು ಹೋಗಲಾಡಿಸುವ ಉದ್ದೇಶದಿಂದ ನಮ್ಮ ಮುಂದಿನ ಯೋಜನೆಗಳಿಗೆ ಇಂದಿರಾ ಗಾಂಧಿಯ ಹೆಸರನ್ನು ಇಡಲಾಗುವುದು.
-ರಮೇಶ್‌ಕುಮಾರ್ ಆರೋಗ್ಯ ಸಚಿವ
ಬಸ್‌ದರ ಶೇ.50ರಷ್ಟು ಕಡಿಮೆಯಾಗಲಿ
ಬೆಂಗಳೂರು ಜನತೆ ತಮ್ಮ ಖಾಸಗಿ ವಾಹನಗಳನ್ನು ಬದಿಗೊತ್ತಿ ಮೆಟ್ರೋ ರೈಲು ಹಾಗೂ ಸರಕಾರಿ ಬಸ್‌ಗಳಲ್ಲಿ ಪ್ರಯಾಣಿಸುವಂತೆ ಪ್ರೋತ್ಸಾಹ ನೀಡಬೇಕು. ಈ ಹಿನ್ನೆಲೆಯಲ್ಲಿ ಬಸ್ ಹಾಗೂ ಮೆಟ್ರೊ ರೈಲಿನ ದರವನ್ನು ಶೇ.50ರಷ್ಟು ಕಡಿಮೆ ಮಾಡುವ ಅಗತ್ಯವಿದೆ. ಈ ಬಗ್ಗೆ ಸಾರಿಗೆ ಸಚಿವ ಹಾಗೂ ಅಧಿಕಾರಿಗಳು ಗಂಭೀರವಾಗಿ ಚಿಂತಿಸಲಿ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ







