ಇನ್ಫೋಸಿಸ್ ನೂತನ ಸಿಇಒ ಆಗಿ ಸಲೀಲ್ ಪರೇಖ್

ಬೆಂಗಳೂರು,ಡಿ.2: ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತ ನಿರ್ದೇಶಕರಾಗಿ ಸಲೀಲ್ ಎಸ್.ಪಾರೇಖ್ ನೇಮಕಗೊಂಡಿದ್ದಾರೆ. ಸಲೀಲ್ ಅವರ ನೇಮಕವು 2018ರ ಜನವರಿ 2ರಿಂದ ಜಾರಿಗೆ ಬರಲಿದೆಯೆಂದು ಇನ್ಫೋಸಿಸ್‌ನ ಪತ್ರಿಕಾ ಪ್ರಕಟಣೆ ತಿಳಿಸಿದೆ. ಕಳೆದ ಆಗಸ್ಟ್‌ನಲ್ಲಿ ಇನ್ಫೋಸಿಸ್‌ನ ಹಂಗಾಮಿ ಸಿಇಓ ಹಾಗೂ ಆಡಳಿತ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಯು.ಬಿ.ಪ್ರವೀಣ್ ರಾವ್ ಅವರ ಸ್ಥಾನದಲ್ಲಿ ನೇಮಕಗೊಂಡಿದ್ದಾರೆ.
ಐದು ವರ್ಷಗಳ ಅವಧಿಗೆ ಸಲೀಲ್ ನೇಮಕಗೊಂಡಿದ್ದಾರೆ ಇನ್ಫೋಸಿಸ್‌ನ ನಾಮನಿರ್ದೇಶನ ಹಾಗೂ ಸಂಭಾವನೆ ಸಮಿತಿಯ ಶಿಫಾರಸಿನ ಆಧಾರದಲ್ಲಿ ಸಲೀಲ್ ಅವರ ನೇಮಕವಾಗಿದೆ. ಹಂಗಾಮಿ ಸಿಇಓ ಹಾಗೂ ಆಡಳಿತ ನಿರ್ದೇಶಕ ಪ್ರವೀಣ್ ರಾವ್ ಮುಂದಿನ ವರ್ಷದ ಜನವರಿ 2ರಂದು ಅಧಿಕಾರದಿಂದ ನಿರ್ಗಮಿಸಲಿದ್ದಾರೆ. ಆದರೆ ಅವರು ಸಂಸ್ಥೆಯ ಮುಖ್ಯ ನಿರ್ವಾಹಕ ಅಧಿಕಾರಿ ಹಾಗೂ ಪೂರ್ಣ ಪ್ರಮಾಣದ ಆಡಳಿತ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ ಎಂದು ಇನ್ಫೋಸಿಸ್‌ನ ಹೇಳಿಕೆ ತಿಳಿಸಿದೆ.
ಪಾರೇಖ್ ಅವರ ನೇಮಕಾತಿಯನ್ನು ಇನ್ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಣಿ ಸ್ವಾಗತಿಸಿದ್ದಾರೆ. ‘‘ ಇನ್ಫೋಸಿಸ್‌ನ ಸಿಇಓ ಹಾಗೂ ಆಡಳಿತನಿರ್ದೇಶಕರಾಗಿ ಪಾರೇಖ್ ನಮ್ಮೋಂದಿಗೆ ಸೇರಿಕೊಳ್ಳಲಿರುವುದು ನನಗೆ ಸಂತಸತಂದಿದೆ. ಐಟಿ ಕ್ಷೇತ್ರದಲ್ಲಿ ಅವರಿಗೆ ಮೂರು ದಶಕಗಳ ಜಾಗತಿಕ ಅನುಭವವಿದೆ’’ ಎಂದಿದ್ದಾರೆ.
ಮಾಹಿತಿ ತಂತ್ರಜ್ಞಾನ ಉದ್ಯಮದ ಈ ಪರಿವರ್ತನಾತ್ಮಕ ಸಮಯದಲ್ಲಿ ಇನ್ಫೋಸಿಸ್ ಮುನ್ನಡೆಸಲು ಪಾರೇಖ್ ಸೂಕ್ತ ವ್ಯಕ್ತಿಯೆಂದು ಆಡಳಿತ ಮಂಡಳಿ ನಂಬಿದೆಯೆಂದು ನಿಲೇಕಣಿ ಹೇಳಿದ್ದಾರೆ.







