ಆರು ಅಣುಚಾಲಿತ ಜಲಾಂತರ್ಗಾಮಿಗಳ ನಿರ್ಮಾಣ ಯೋಜನೆಗೆ ಭಾರತದ ಚಾಲನೆ
ಚೀನಾವನ್ನು ಎದುರಿಸಲು ಸಜ್ಜು

ಹೊಸದಿಲ್ಲಿ, ಡಿ. 2: ಚೀನಾ ತನ್ನ ನೌಕಾಪಡೆಯ ಬಲವನ್ನು ವರ್ಧಿಸಿಕೊಳ್ಳುತ್ತಿರುವುದನ್ನು ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಅದರ ಹೆಚ್ಚುತ್ತಿರುವ ಮಿಲಿಟರಿ ಚಟುವಟಿಕೆ ಗಳನ್ನು ಎದುರಿಸಲು ಆರು ಅಣುಚಾಲಿತ ದಾಳಿ ಜಲಾಂತರ್ಗಾಮಿಗಳ ನಿರ್ಮಾಣದ ಬೃಹತ್ ಯೋಜನೆಗೆ ಭಾರತವು ಚಾಲನೆ ನೀಡಿದೆ.
ಈ ಯೋಜನೆಯು ದೇಶದ ನೌಕಾಪಡೆ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುವ ಜೊತೆಗೆ ಡೋಕಾ ಲಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾಕ್ಕೆ ಸ್ಪಷ್ಟ ಸಂದೇಶವಾಗಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಜಲಾಂತರ್ಗಾಮಿಗಳ ನಿರ್ಮಾಣ ಯೋಜನೆಯನ್ನು ಪ್ರಕಟಿಸಿದ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸುನಿಲ ಲಾಂಬಾ ಅವರು, ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ನಡುವೆ ನೂತನವಾಗಿ ಪ್ರಸ್ತಾಪಿತ ಚತುಷ್ಪಕ್ಷೀಯ ಮೈತ್ರಿಯಡಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಇನ್ನಷ್ಟು ಪ್ರಮುಖ ಪಾತ್ರವನ್ನು ವಹಿಸಲು ಭಾರತೀಯ ನೌಕಾಪಡೆಯು ಸಿದ್ಧವಾಗಿದೆ ಎಂದು ತಿಳಿಸಿದರು.
ನೌಕಾಪಡೆ ದಿನಾಚರಣೆಯ ಮುನ್ನಾದಿನದ ಸುದ್ದಿಗೋಷ್ಠಿಯಲ್ಲಿ ಹಲವಾರು ವಿಷಯಗಳ ಬಗ್ಗೆ ಲಾಂಬಾ ಮಾತನಾಡಿದರಾದರೂ, ಜಲಾಂತರ್ಗಾಮಿಗಳು, ಯುದ್ಧನೌಕೆಗಳು ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಗಳ ವ್ಯಾಪಕ ಖರೀದಿಯ ಕುರಿತು ಅವರ ಪ್ರಕಟಣೆ ಮಹತ್ವವನ್ನು ಪಡೆದುಕೊಂಡಿದೆ. ಭಾರತೀಯ ನೌಕಾಪಡೆಯು ಯಾವುದೇ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಬೆದರಿಕೆಗಳನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದರು.
ಭಾರತದ ಸುತ್ತ ಸಮುದ್ರ ಪ್ರದೇಶದಲ್ಲಿ ಭದ್ರತಾ ಸ್ಥಿತಿಯ ಕುರಿತಂತೆ ಮಾತನಾಡಿದ ಅವರು, ಕಡಲ್ಗಳ್ಳತನ ನಿಗ್ರಹ ಕಾರ್ಯಾಚರಣೆಗಾಗಿ ಚೀನಾ ಹಿಂದೂ ಮಹಾಸಾಗರದಲ್ಲಿ ತನ್ನ ಜಲಾಂತರ್ಗಾಮಿ ನೌಕೆಗಳನ್ನು ನಿಯೋಜಿಸಿರುವುದು ಅಸಮಂಜಸವಾಗಿದೆ ಮತ್ತು ಭಾರತೀಯ ನೌಕಾಪಡೆಯು ಸಂಭಾವ್ಯ ಬೆದರಿಕೆಗಳನ್ನು ಪರಿಶೀಲಿಸುತ್ತಿದೆ ಎಂದು ತಿಳಿಸಿದರು.
ಚೀನಾ ಅಭಿವೃದ್ಧಿಗೊಳಿಸುತ್ತಿರುವ, ವ್ಯೆಹಾತ್ಮಕವಾಗಿ ಮಹತ್ವದ್ದಾಗಿರುವ ಪಾಕಿಸ್ತಾನದ ಗ್ವಾದಾರ್ ಬಂದರಿನಲ್ಲಿ ಚೀನಿ ಯುದ್ಧನೌಕೆಗಳು ನಿಯೋಜನೆಗೊಂಡರೆ ಸಂಭಾವ್ಯ ಭದ್ರತಾ ಸವಾಲುಗಳ ಬಗ್ಗೆಯೂ ಅವರು ಮಾತನಾಡಿದರು.
ಯಾವುದೇ ಸಮಯದಲ್ಲಿಯೂ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಎಂಟು ನೌಕೆಗಳು ನಿಯೋಜಿತವಾಗಿರುತ್ತವೆ ಮತ್ತು ಡೋಕಾ ಲಾ ಬಿಕ್ಕಟ್ಟಿನ ಸಂದರ್ಭ ಆಗಸ್ಟ್‌ನಲ್ಲಿ ಈ ನೌಕೆಗಳ ಸಂಖ್ಯೆ 14ಕ್ಕೇರಿತ್ತು ಎಂದರು.
ಪ್ರಮುಖ ಜಲಮಾರ್ಗಗಳಲ್ಲಿ ಭಾರತೀಯ ನೌಕಾಪಡೆಯ ಉಪಸ್ಥಿತಿಯ ವಿಸ್ತರಣೆ ಕುರಿತಂತೆ ಲಾಂಬಾ, ಅದು ಅಂಡಮಾನ್ ಸಮುದ್ರ, ಮಲಕ್ಕಾ ಜಲಸಂಧಿ, ಓಮನ್ ಕೊಲ್ಲಿ, ಪರ್ಷಿಯನ್ ಕೊಲ್ಲಿ, ಸುಂಡಾ ಮತ್ತು ಲಂಬಕ್‌ಗಳಲ್ಲಿ ತನ್ನ ನೌಕೆಗಳ ನಿಯೋಜನೆ ಯನ್ನು ಕ್ರಮೇಣ ಹೆಚ್ಚಿಸುತ್ತಿದೆ ಎಂದು ತಿಳಿಸಿದರು.
ಅಣುಚಾಲಿತ ಜಲಾಂತರ್ಗಾಮಿ ನೌಕೆ ಐಎನ್‌ಎಸ್ ಚಕ್ರಾವನ್ನು ಪ್ರವೇಶಿಸಲು ಅಮೆರಿಕದ ತಂಡಕ್ಕೆ ಅವಕಾಶ ನೀಡಲಾಗಿತ್ತು ಎಂಬ ರಷ್ಯಾದ ಮಾಧ್ಯಮಗಳಲ್ಲಿಯ ವಿವಾದದ ಕುರಿತು ಮಾತನಾಡಿದ ಅವರು, ಅಮೆರಿಕದ ಯಾವುದೇ ಅಧಿಕಾರಿಯು ಅದನ್ನು ಹತ್ತಿರದಿಂದಲೂ ನೋಡಿಲ್ಲ ಎಂದು ಸ್ಪಷ್ಟಪಡಿಸಿದರು.
ನೌಕಾಪಡೆಯ ಆಧುನೀಕರಣ ಕುರಿತಂತೆ, 34 ನೌಕೆಗಳು ನಿರ್ಮಾಣ ಹಂತದಲ್ಲಿವೆ ಮತ್ತು ಖಾಸಗಿ ಹಡಗು ನಿರ್ಮಾಣ ಸಂಸ್ಥೆಗಳ ಪಾಲ್ಗೊಳ್ಳುವಿಕೆಗಾಗಿ 40,000 ಕೋ.ರೂ.ವೆಚ್ಚದ ಯೋಜನೆಗಳನ್ನು ಗುರುತಿಸಲಾಗಿದೆ ಎಂದು ಲಾಂಬಾ ತಿಳಿಸಿದರು.







