ಸೌಹಾರ್ದತೆಯಿಂದ ಬಾಳುವುದು ಮಾನವೀಯತೆ ಲಕ್ಷಣ -ಎಸ್ಪಿ ಸಂಜೀವ್ ಪಾಟೀಲ್

ಕುಂದಾಪುರ, ಡಿ.2: ಸರ್ವಧರ್ಮೀಯರು ಶಾಂತಿ, ಸೌಹಾರ್ದತೆಯಿಂದ ಬಾಳುವುದು ಮಾನವತೆಯ ಲಕ್ಷಣ. ಕೋಡಿಯಲ್ಲಿರುವ ಸೌಹಾರ್ದತೆ ಇತರರಿಗೆ ಮಾದರಿ. ಪರಸ್ಪರ ಗೌರಭಾವದಿಂದ ಪ್ರತಿಯೊಬ್ಬರು ಬಾಳಿದಾಗ ಶಾಂತಿಯ ಹೂದೋಟ ಅರಳಲು ಸಾಧ್ಯವಾಗುತ್ತದೆ. ಕೋಡಿ ಇದಕ್ಕೊಂದು ಸಾಕ್ಷಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಎಂ.ಪಾಟೀಲ್ ಹೇಳಿದ್ದಾರೆ.
ಕೋಡಿಯಲ್ಲಿ ಮೀಲಾದುನ್ನಬಿ ಸಂಭ್ರಮದಲ್ಲಿ ಭಾಗವಹಿಸಿದ ಅವರು ಸನ್ಮಾನ ಸ್ವೀಕರಿಸಿ ಮಾತನಾಡುತಿದ್ದರು.
ಇಂದು ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಪರಸ್ಪರ ವಿಶ್ವಾಸ ಕದಡುವ ಪ್ರಯತ್ನ ನಡೆಯುತ್ತಿದೆ. ಆದರೆ ಕೋಡಿ ಪರಿಸರದಲ್ಲಿ ಇಂತಹ ಘಟನೆಗಳು ಸಂಭವಿಸಿದಾಗ ಎಲ್ಲಾ ಸಮಾಜದ ಹಿರಿಯರು ಒಂದುಗೂಡಿ ಅದನ್ನು ತಿಳಿಗೊಳಿಸುವ ಪ್ರಯತ್ನ ನಡೆಸುತ್ತಾರೆ. ಇದು ಎಲ್ಲಾ ಕಡೆಗಳಲ್ಲೂ ನಡೆಯಬೇಕು ಎಂದವರು ನುಡಿದರು.
ಕೋಡಿಯ ಮುಹಿದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ಯೂನುಸ್ ಸಖಾಫಿ ಮತ್ತು ಬಿಲಾಲ್ ಜುಮ್ಮಾ ಮಸೀದಿಯ ಖತೀಬರಾದ ಅಬ್ದುಲ್ ರೆಹಮಾನ್ ಸಖಾಫಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸನ್ಮಾನಿಸಿದರು.
ಕುಂದಾಪುರ ಠಾಣಾಧಿಕಾರಿ ಹರೀಶ್‌ಅವರನ್ನು ಗೌರವಿಸಲಾಯಿತು. ಯಂಗ್ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್‌ನ ಅಧ್ಯಕ್ಷ ಅಶ್ರಫ್ ಬ್ಯಾರಿ, ಕೋಡಿ ಕಲ್ಚರಲ್ ಫೌಂಡೇಷನ್‌ನ ಅಧ್ಯಕ್ಷ ಮಹಮ್ಮದ್ ರಿಯಾಜ್, ಕಾರ್ಯದರ್ಶಿ ರವೂಫ್ ಕೋಡಿ, ಹಿರಿಯರಾದ ಕೋಡಿ ಅಬ್ದುಲ್ಲಾ, ಕೆ.ಇಬ್ರಾಹಿಂ, ಜಿ.ಉಸ್ಮಾನ್, ಮುಸ್ತಾಕ್ ಆಲ್ ಆರೀಫ್, ಬಿ.ಕಿ.ಅಹಮ್ಮದ್ ಉಪಸ್ಥಿತರಿದ್ದರು. ಹುಸೇನ್ ಅಹಸನಿ ಕಾರ್ಯಕ್ರಮ ನಿರೂಪಿಸಿದರು.







