ಆಸ್ಪತ್ರೆಯಿಂದ ಹಿಂದುರುವಾಗ ಮಾರ್ಗಮಧ್ಯೆ ಮೃತಪಟ್ಟ ಮುಖ್ಯಪೇದೆ
ಮೈಸೂರು,ಡಿ.2: ಸ್ವಲ್ಪ ಅನಾರೋಗ್ಯವೆಂದು ವೈದ್ಯರ ಬಳಿ ಪರೀಕ್ಷಿಸಿಕೊಂಡು ಹಿಂದಿರುಗಿ ಬರುವಾಗ ಮಾರ್ಗಮಧ್ಯದಲ್ಲಿಯೇ ಪೊಲೀಸ್ ಹೆಡ್ ಕಾನ್ಸಟೇಬಲ್ ಓರ್ವರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ದೇವರಾಜ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಷಡಕ್ಷರಿ ಎನ್ನಲಾಗಿದೆ. 44ರ ಹರೆಯದ ಷಡಕ್ಷರಿ ಮೂಲತ: ಕೆ.ಆರ್.ನಗರದವರು. ಇವರು ಮೈಸೂರಿನಲ್ಲಿ ನೆಲೆಸಿದ್ದರು. ಕಳೆದ ಹದಿನೆಂಟು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿದ್ದರು. ಕೈಯ್ಯಲ್ಲಿ ಸರಿಯಾಗಿ ರಕ್ತಸಂಚಾರವಾಗುತ್ತಿಲ್ಲ ಎಂಬ ಕಾರಣಕ್ಕೆ ಮೈಸೂರಿನಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಪರೀಕ್ಷಿಸಿಕೊಂಡಿದ್ದರು.
ಆಸ್ಪತ್ರೆಯ ವೈದ್ಯರು ನೀವು ಬೆಂಗಳೂರು ಕಿದ್ವಾಯಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಿ ಎಂದು ತಿಳಿಸಿದ್ದು, ಬೆಂಗಳೂರಿಗೆ ತೆರಳಿದ್ದರು. ಪರೀಕ್ಷಿಸಿದ ಅಲ್ಲಿನ ವೈದ್ಯರು ಕ್ಯಾನ್ಸರ್ ಸೆಲ್ ಇರುವಂತೆ ಕಾಣಿಸುತ್ತಿದೆ ಎಂದಿದ್ದಾರೆ ಎನ್ನಲಾಗಿದೆ. ಆದರೆ ಅವರು ಮನೆಗೆ ಬರುವ ಮಾರ್ಗಮಧ್ಯೆ ಚನ್ನಪಟ್ಟಣದ ಬಳಿ ವಾಹನದಲ್ಲಿಯೇ ಸಾವನ್ನಪ್ಪಿದ್ದಾರೆ. ಅವರ ನಿಧನಕ್ಕೆ ಅವರ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.





