ರಾಹುಲ್‌ಗಾಂಧಿ ಎಐಸಿಸಿ ಅಧ್ಯಕ್ಷರಾದರೆ ಪಕ್ಷದ ಬಲವರ್ಧನೆ: ಪಲ್ಲಂರಾಜು
ಬೆಂಗಳೂರು, ಡಿ.2: ಎಐಸಿಸಿ ಅಧ್ಯಕ್ಷರಾಗಿ ಸೋನಿಯಾಗಾಂಧಿ 18 ವರ್ಷಗಳ ಕಾಲ ಪಕ್ಷವನ್ನು ಮುನ್ನಡೆಸಿದ್ದು, ಇದೀಗ ರಾಹುಲ್‌ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುತ್ತಿದ್ದಾರೆ. ಅವರ ಆಯ್ಕೆಯಿಂದ ಪಕ್ಷ ಮತ್ತಷ್ಟು ಬಲಗೊಳ್ಳಲಿದೆ ಎಂದು ಕಾಂಗ್ರೆಸ್ ಪಕ್ಷದ ಚುನಾವಣಾಧಿಕಾರಿ ಪಲ್ಲಂರಾಜು ಅಭಿಪ್ರಾಯಪಟ್ಟರು.
ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ರಾಹುಲ್ ಗಾಂಧಿಯ ನಾಮಪತ್ರಕ್ಕೆ ಸೂಚಕರಾಗಿ ರಾಜ್ಯದ 20 ಮಂದಿ ಹಿರಿಯ ಮುಖಂಡರ ಸಹಿ ಸಂಗ್ರಹದ ಬಳಿಕ ಅವರು ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ರಾಹುಲ್ ಗಾಂಧಿ ಸಲ್ಲಿಸಲಿರುವ ನಾಮಪತ್ರಕ್ಕೆ ಕರ್ನಾಟಕದಿಂದ 20 ಮಂದಿ ಸೂಚಕರ ಸಹಿಯನ್ನು ಪಡೆದಿದ್ದೇವೆ. ಎಲ್ಲ ರಾಜ್ಯಗಳಲ್ಲಿ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿದ್ದು, ಪ್ರತಿಯೊಂದು ರಾಜ್ಯದಿಂದ 20 ಮಂದಿ ಸದಸ್ಯರ ಸಹಿ ಪಡೆಯಲಾಗುತ್ತಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ 130 ವರ್ಷಗಳ ಇತಿಹಾಸವಿದೆ. ಜನರ ಮನಸ್ಸಿನಲ್ಲಿ ನಮ್ಮ ಪಕ್ಷ ಅಚ್ಚಳಿಯದೆ ಉಳಿದಿದೆ. ಇದೀಗ ಹೊಸ ಅಧ್ಯಕ್ಷರ ಆಯ್ಕೆ ನಡೆಯುತ್ತಿದೆ. ಡಿ.4ರಂದು ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಮುಕ್ತ ಮನಸ್ಸಿನ ರಾಹುಲ್‌ಗಾಂಧಿ ನಾಯಕತ್ವವು ದೇಶಾದ್ಯಂತ ಯುವಕರನ್ನು ಸೆಳೆಯುವ ಶಕ್ತಿಯನ್ನು ಹೊಂದಿದೆ ಎಂದು ಪಲ್ಲಂರಾಜು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ರಾಹುಲ್‌ಗಾಂಧಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ರಾಜ್ಯದಿಂದ 20 ಮಂದಿ ಹಿರಿಯ ಸದಸ್ಯರು ಸೂಚಕರಾಗಿ ಸಹಿ ಮಾಡಿದ್ದು, ಅದನ್ನು ಹೊಸದಿಲ್ಲಿಗೆ ಕಳುಹಿಸಿಕೊಡುತ್ತಿದ್ದೇವೆ. ಇದು ಅವರ ಆಯ್ಕೆಗೆ ಸಹಕಾರಿಯಾಗಲಿದೆ ಎಂದರು.
ಅಲ್ಪಸಂಖ್ಯಾತರು, ದಲಿತರು ಕಾಂಗ್ರೆಸ್ ಪಕ್ಷವನ್ನು ನಂಬಬೇಡಿ ಎಂದು ಹೇಳಿಕೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದ ಪರಮೇಶ್ವರ್, ದಲಿತರು ಹಾಗೂ ಅಲ್ಪಸಂಖ್ಯಾತರ ಬಗ್ಗೆ ನಮಗಿರುವ ಬದ್ಧತೆ ಕುರಿತು ಕುಮಾರಸ್ವಾಮಿಯ ಪ್ರಮಾಣಪತ್ರ ಬೇಕಾಗಿಲ್ಲ ಎಂದರು.
ದಲಿತರ ಜೀವನಮಟ್ಟವನ್ನು ಸುಧಾರಿಸಲು ಕಾಂಗ್ರೆಸ್ ಶ್ರಮಿಸಿದೆ. ಅವರಲ್ಲಿರುವ ಶಿಕ್ಷಣದ ಪ್ರಮಾಣವು ಶೇ.68ಕ್ಕೆ ಏರಿಕೆಯಾಗಿದೆ. ದಲಿತರು ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.
ಆಪರೇಷನ್ ಕಮಲಕ್ಕೆ ಸಿದ್ದರಾಮಯ್ಯ ಕುಮ್ಮಕ್ಕು ನೀಡಿದ್ದರು ಎಂದು ಕುಮಾರಸ್ವಾಮಿ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಖ್ಯಮಂತ್ರಿಯಾಗಲು ಅವರು ಈ ಹಿಂದೆ ಏನೆಲ್ಲಾ ಮಾಡಿದರು ಎಂಬುದನ್ನು ನೆನಪಿಸಿಕೊಳ್ಳಲಿ ಎಂದರು.
ಸಿದ್ದರಾಮಯ್ಯ ಪಕ್ಷದ ಬಲವರ್ಧನೆ ಮಾಡುವುದಕ್ಕಾಗಿ ಬಂದಿರುವುದು. ಅವರು ಎಲ್ಲಿರುತ್ತಾರೋ ಅಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಾರೆ. ಸಿದ್ದರಾಮಯ್ಯ ಯಾವುತ್ತೂ ಆಪರೇಷನ್ ಕಮಲಕ್ಕೆ ಕುಮ್ಮಕ್ಕು ನೀಡಿದವರಲ್ಲ. ಉಮೇಶ್ ಕತ್ತಿ, ಜಗ್ಗೇಶ್ ಸೇರಿದಂತೆ ಅನೇಕರು ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರ್ಪಡೆಯಾದರು. ಅವರು ಬೇಕಾದರೆ ಈ ಬಗ್ಗೆ ಹೇಳಿಕೆ ನೀಡಲಿ ಎಂದು ಶಿವಕುಮಾರ್ ತಿಳಿಸಿದರು.
ಸೂಚಕರು: ರಾಹುಲ್‌ಗಾಂಧಿ ನಾಮಪತ್ರಕ್ಕೆ ಸೂಚಕರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಕೇಂದ್ರ ಸಚಿವರಾದ ಸಿ.ಕೆ.ಜಾಫರ್ ಶರೀಫ್, ಎಂ.ವಿ.ರಾಜಶೇಖರನ್, ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಆರ್.ಸೀತಾರಾಂ, ಎಸ್.ಎಸ್.ಮಲ್ಲಿಕಾರ್ಜುನ್, ಕೆ.ಜೆ.ಜಾರ್ಜ್, ಎಚ್.ಕೆ.ಪಾಟೀಲ್, ಈಶ್ವರ ಖಂಡ್ರೆ, ಸಂಸದರಾದ ಕೆ.ಎಚ್.ಮುನಿಯಪ್ಪ, ಎಂ.ವೀರಪ್ಪಮೊಯ್ಲಿ, ಮಾಜಿ ಸಚಿವೆ ಮೋಟಮ್ಮ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯಸಭಾ ಸದಸ್ಯ ಡಾ.ಕೆ.ರಹ್ಮಾನ್‌ಖಾನ್, ಶಾಸಕ ಸಿ.ಎಸ್.ನಾಡಗೌಡ, ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ಮುಖಂಡರಾದ ಯು.ಬಿ.ವೆಂಕಟೇಶ್, ಬಿ.ಎಲ್.ಶಂಕರ್ ಸಹಿ ಮಾಡಿದರು.
ಎಚ್‌ಡಿಕೆಗೆ ತಪ್ಪು ಮಾಹಿತಿ ಸಿಕ್ಕಿದೆ
ಕುಮಾರಸ್ವಾಮಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ರಾಜಕಾರಣಕ್ಕಾಗಿ ಇಂತಹ ಮಾತುಗಳನ್ನಾಡುತ್ತಿದ್ದಾರೆ. ಸಿದ್ದರಾಮಯ್ಯ ಯಾವುತ್ತೂ ಆಪರೇಷನ್ ಕಮಲಕ್ಕೆ ಕುಮ್ಮಕ್ಕು ನೀಡಿದವರಲ್ಲ. ಉಮೇಶ್ ಕತ್ತಿ, ಜಗ್ಗೇಶ್ ಸೇರಿದಂತೆ ಅನೇಕರು ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರ್ಪಡೆಯಾದರು. ಅವರು ಬೇಕಾದರೆ ಈ ಬಗ್ಗೆ ಹೇಳಿಕೆ ನೀಡಲಿ.
-ಡಿ.ಕೆ.ಶಿವಕುಮಾರ್, ಇಂಧನ ಸಚಿವ
ಬಿಜೆಪಿಯಿಂದ ಇವಿಎಂ ದುರ್ಬಳಕೆ
ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಇಲೆಕ್ಟ್ರಾನಿಕ್ ಮತಯಂತ್ರ(ಇವಿಎಂ)ಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಅಮೆರಿಕಾದ ತಜ್ಞರೆ ಇವಿಎಂ ದುರ್ಬಳಕೆ ಕುರಿತು ಬೆಳಕು ಚೆಲ್ಲಿದ್ದಾರೆ. ಹಲವು ಸಂದರ್ಭಗಳಲ್ಲಿ ನಾವು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದೇವೆ. ಗುಜರಾತ್ ಚುನಾವಣೆಯಲ್ಲೂ ಇವಿಎಂಗಳ ದುರ್ಬಳಕೆಯಾಗಬಹುದು ಎಂಬ ಅನುಮಾನವಿದೆ.
-ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ







