ಅಜೀರ್ಣ ಸಮಸ್ಯೆಯವನ ಹೊಟ್ಟೆಯಲ್ಲಿದ್ದ ವಸ್ತುವನ್ನು ಕಂಡು ವೈದ್ಯರಿಗೆ ಶಾಕ್!

ನಾಸಿಕ್,ಡಿ.2: ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ಬುಡಕಟ್ಟು ವ್ಯಕ್ತಿಯೊಬ್ಬನ ಶಸ್ತ್ರಕ್ರಿಯೆ ನಡೆಸಿದ ವೈದ್ಯರು ಆತನ ಉದರದಿಂದ 72 ನಾಣ್ಯಗಳನ್ನು ಹೊರತೆಗೆದಿದ್ದಾರೆ. ನಿರ್ದಿಷ್ಟಮಾನಸಿಕ ವ್ಯಾಧಿಯಿಂದ ಬಳಲುತ್ತಿದ್ದ ಈ ವ್ಯಕ್ತಿಯು ದೀರ್ಘ ಸಮಯದಿಂದ ನಾಣ್ಯಗಳನ್ನು ನುಂಗುತ್ತಿದ್ದನೆಂದು ವೈದ್ಯರು ಶುಕ್ರವಾರ ತಿಳಿಸಿದ್ದಾರೆ.
ಶಸ್ತ್ರಕ್ರಿಯೆಗೊಳಗಾದ ಬುಡುಕಟ್ಟು ಸಮುದಾಯದ 50 ವರ್ಷ ವಯಸ್ಸಿನ ಕೃಷ್ಣ ಸೋಮಾಲ್ಯ ಸಂಬಾರ್ , ಲೋಹದ ವಸ್ತುಗಳನ್ನು ನುಂಗುವ ಗೀಳನ್ನು ಉಂಟು ಮಾಡುವ ಮೆಟಲ್ಲೊಫಾಗಿಯಾ ಎಂಬ ಅಪರೂಪದ ಕಾಯಿಲೆಯಿಂದ ನರಳುತ್ತಿದ್ದನೆಂದು, ಶಸ್ತ್ರಕ್ರಿಯೆ ನಡೆಸಿದ ವೈದ್ಯರ ತಂಡದ ನೇತೃತ್ವ ವಹಿಸಿದ್ದ ಡಾ. ಅಮಿತ್ ಕೇಳೆ ತಿಳಿಸಿದ್ದಾರೆ
ಕಬ್ಬಿಣ ಹಾಗೂ ನಾಣ್ಯಗಳನ್ನು ನುಂಗುವ ಗೀಳಿನಿಂದಾಗಿ, ಕೃಷ್ಣ ಸೋಮಾಲ್ಯ ಪದೇ ಪದೇ ವಾಂತಿ ಹಾಗೂ ಅಜೀರ್ಣದ ತೊಂದರೆಗಳನ್ನು ಅನುಭವಿಸುತ್ತಿದ್ದನೆಂದು ವೈದ್ಯರು ಹೇಳಿದ್ದಾರೆ.ಗುರುವಾರ ಸುಮಾರು ಮೂರೂವರೆ ತಾಸುಗಳ ಕಾಲ ಶಸ್ತ್ರಕ್ರಿಯೆ ನಡೆದಿದ್ದು,ಆತನ ಉದರದಿಂದ ಎಲ್ಲಾ ಲೋಹದ ನಾಣ್ಯಗಳನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಸೋಮಾಲ್ಯ ಈಗ ಚೇತರಿಸಿಕೊಳ್ಳುತ್ತಿದ್ದಾನೆ ವೈದ್ಯರು ತಿಳಿಸಿದ್ದಾರೆ.





