ಶಿಕ್ಷಣ ವೆಚ್ಚದಲ್ಲಿ ಗುಜರಾತ್‌ಗೆ 26ನೆ ರ‍್ಯಾಂಕ್ ಯಾಕೆ?: ಪ್ರಧಾನಿಗೆ ರಾಹುಲ್ ಪ್ರಶ್ನೆ

ಹೊಸದಿಲ್ಲಿ,ಡಿ.2: ಬಿಜೆಪಿ ಆಳ್ವಿಕೆಯ ಗುಜರಾತ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸರಕಾರ ಅತ್ಯಂತ ಕಡಿಮೆ ವೆಚ್ಚ ಮಾಡುತ್ತಿರುವ ಬಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಶನಿವಾರ ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಚಾಟಿ ಬೀಸಿದ್ದಾರೆ.
ರಾಹುಲ್, ತನ್ನ ‘ದಿನಕ್ಕೊಂದು ಪ್ರಶ್ನೆ’ ಸರಣಿಯ ತನ್ನ ನಾಲ್ಕನೆ ಪ್ರಶ್ನೆಯಾಗಿ ‘‘ ಸರಕಾರಿ ಶಿಕ್ಷಣದ ಮೇಲಿನ ವೆಚ್ಚದ ರ‍್ಯಾಂಕಿಂಗ್‌ನಲ್ಲಿ ಗುಜರಾತ್ ಸರಕಾರ ಯಾಕೆ 26ನೇ ಸ್ಥಾನದಲ್ಲಿದೆ?. ಈ ರಾಜ್ಯದ ಯುವಜನತೆ ಏನು ತಪ್ಪು ಮಾಡಿದ್ದಾರೆ’’ ಎಂದು ಕೇಳಿದ್ದಾರೆ.
ಸರಕಾರಿ ಶಾಲೆಗಳು, ಶಿಕ್ಷಣಸಂಸ್ಥೆಗಳನ್ನು ಬಲಿಗೊಟ್ಟು ಶಿಕ್ಷಣವನ್ನು ವಾಣಿಜ್ಯೀಕರಣಗೊಳಿಸಲಾಗಿದೆ ಹಾಗೂ ಶುಲ್ಕಗಳಲ್ಲಿ ಏರಿಕೆ ಮಾಡಿ, ವಿದ್ಯಾರ್ಥಿಗಳು ಬಾಧೆಪಡುವಂತೆ ಮಾಡಲಾಗಿದೆ ಎಂದು ಗುಜರಾತ್‌ನಲ್ಲಿ ಕಾಂಗ್ರೆಸ್‌ನ ಚುನಾವಣಾ ಪ್ರಚಾರದ ನೇತೃತ್ವ ವಹಿಸಿರುವ ರಾಹುಲ್, ಪ್ರಧಾನಿ ವಿರುದ್ಧ ಟ್ವೀಟ್ ಮಾಡಿದ್ದಾರೆ.
‘‘ಹೀಗಾದರೆ ನವಭಾರತದ ಕನಸು, ಈಗ ಹೇಗೆ ಸಾಕಾರಗೊಳ್ಳುವುದು ’’ಎಂದು ಗಾಂಧಿ ಗುಜರಾತ್‌ನಲ್ಲಿ ಬಿಜೆಪಿಯ ಪರ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿರುವ ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.
ಗುಜರಾತ್‌ನಲ್ಲಿ ಖಾಸಗಿ ಕಂಪೆನಿಗಳಿಂದ ಅಧಿಕ ದರದಲ್ಲಿ ವಿದ್ಯುತ್ ಖರೀದಿಸುವ ಮೂಲಕ ಸಾರ್ವಜನಿಕ ಹಣವನ್ನು ಯಾಕೆ ಪೋಲು ಮಾಡಲಾಗುತ್ತಿದೆಯೆಂದು ರಾಹುಲ್, ‘‘22 ಸಾಲೋಂ ಕಾ ಹಿಸ್ಸಾಬ್, ಗುಜರಾತ್ ಮಾಂಗೆ ಜವಾಬ್’’ (22 ವರ್ಷಗಳ ಬಿಜೆಪಿ ಆಳ್ವಿಕೆಗಾಗಿ ಗುಜರಾತ್ ಉತ್ತರಗಳನ್ನು ಬಯಸುತ್ತಿದೆ) ಎಂಬ ಅಡಿಬರಹದೊಂದಿಗೆ,ರಾಹುಲ್ ಪ್ರಧಾನಿ ಮೋದಿಗೆ ಟ್ವಿಟರ್ ಮೂಲಕ ಪ್ರತಿದಿನವೂ ಒಂದು ಪ್ರಶ್ನೆಯನ್ನು ಎಸೆಯುತ್ತಿದ್ದಾರೆ.
ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆಗೆ ಡಿಸೆಂಬರ್ 9 ಹಾಗೂ 14ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.







