ಇಬ್ಬರು ಕಳ್ಳರ ಬಂಧನ : ಚಿನ್ನಾಭರಣ ವಶ
ಮಂಡ್ಯ, ಡಿ.2: ಮಳವಳ್ಳಿ ತಾಲೂಕು ಹುಸ್ಕೂರು ಗ್ರಾಮದ ಮನೆಯಲ್ಲಿ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕಳುವಾಗಿದ್ದ 50 ಸಾವಿರ ರೂ. ಮೌಲ್ಯದ ಚಿನ್ನಾಭರಣ, 1,700 ರೂ. ಹಾಗು ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ.
ಮಳವಳ್ಳಿ ತಾಲೂಕು ಹಲಗೂರು ಹೋಬಳಿಯ ಚಿಕ್ಕಯಲಚಗೆರೆಯ ವೆಂಕಟೇಶ್ ಅವರ ಪುತ್ರ ಮಧು ಹಾಗೂ ಕಸಬಾ ಹೋಬಳಿಯ ಕೆಂಬೂತಗೆರೆ ಗ್ರಾಮದ ನಾಗರಾಜು ಅವರ ಪುತ್ರ ಆನಂದ ಬಂಧಿತರು.
ಕಳೆದ ತಿಂಗಳ 22 ರಂದು ಹುಸ್ಕೂರು ಗ್ರಾಮದ ದಿವಂಗತ ಚಿಕ್ಕೀರಯ್ಯ ಅವರ ಪತ್ನಿ ಚಿಕ್ಕಮ್ಮ ಅವರ ಮನೆ ಬಾಗಿಲು ಮುರಿದು ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದನ್ನು ಬಂಧಿತ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದ್ದಾರೆ.
ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ ಕೆ.ಎಂ.ದೊಡ್ಡಿ ಸಿಪಿಐ ನವೀನ್, ಹಲಗೂರು ಠಾಣೆ ಪಿಎಸ್‍ಐ ಬಿ.ಎಸ್.ಶ್ರೀಧರ್ ಮತ್ತು ಸಿಬ್ಬಂದಿಯನ್ನು ರಾಧಿಕಾರ ಅಭಿನಂದಿಸಿದ್ದಾರೆ.
Next Story





