ಕೇಂದ್ರ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ:ಕೆ.ಪ್ರಕಾಶ್
ಸಿಪಿಎಂನ ಮಂಡ್ಯ ವಲಯ ಸಮಿತಿಯ 2ನೆ ಸಮ್ಮೇಳನ

ಮಂಡ್ಯ, ಡಿ.2: ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರವನ್ನು ಮುಂದೆ ಮಾಡಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ, ಕಾಂಗ್ರೆಸ್‍ಗಿಂತ ಹತ್ತುಪಟ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಕೆ.ಪ್ರಕಾಶ್ ಆರೋಪಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸಿಪಿಎಂನ ಮಂಡ್ಯ ವಲಯ ಸಮಿತಿಯ 2ನೆ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಪೋರೇಟ್ ಕಂಪನಿಗಳ ಅನುಕೂಲಕ್ಕೆ ಪೂರಕವಾದ ಯೋಜನೆಗಳಿಗೆ ಆದ್ಯತೆ ನೀಡಿದೆ ಎಂದು ಟೀಕಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜನರಲ್ಲಿ ಯುದ್ಧೋನ್ಮಾದ ಮೂಡಿಸುತ್ತಿದ್ದು, ದೇಶದಲ್ಲಿ ಅಶಾಂತಿ ಮೂಡಿಸುತ್ತಿದೆ. ಶಾಂತಿಯುತ ದೇಶದ ಜನರಲ್ಲಿ ಯುದ್ಧಕ್ಕೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಹಿಂದಿನ ಯುಪಿಎ ಸರಕಾರ ಗಗನಕ್ಕೇರುತ್ತಿದ್ದ ಪೆಟ್ರೋಲ್, ಡೀಸಲ್ ಸೇರಿದಂತೆ ಅಗತ್ಯವಸ್ತುಗಳ ಬೆಲೆ ನಿಯಂತ್ರಿಸಲು ವಿಫಲವಾಗಿತ್ತು. ಈ ಕಾರಣಕ್ಕಾಗಿಯೂ ಜನರು ಬಿಜೆಪಿಗೆ ಅಧಿಕಾರ ನೀಡಿದರು. ಆದರೆ, ಅಂದಿನ ಪರಿಸ್ಥಿತಿಯೇ ಇಂದೂ ಮುಂದುವರಿದಿದೆ ಎಂದು ಅವರು ವಿಷಾದಿಸಿದರು.
ನೋಟು ಅಮಾನ್ಯೀಕರಣ, ಜಿಎಸ್‍ಟಿ, ಡಿಜಿಟಲೀಕರಣದ ಮೂಲಕ ದೊಡ್ಡ ಕ್ರಾಂತಿಯನ್ನೇ ಮಾಡುತ್ತಿದ್ದೇವೆ ಎಂದು ಜನರನ್ನು ಮರಳು ಮಾಡಲಾಗುತ್ತಿದೆಯೇ ಹೊರತು, ಇದರಿಂದ ಜನಸಾಮಾನ್ಯರ ಸ್ಥಿತಿ ಸ್ವಲ್ಪವೂ ಸುಧಾರಿಸಿಲ್ಲ ಎಂದು ಅವರು ಆರೋಪಿಸಿದರು.
ನರೇಂದ್ರಮೋದಿ ಅವರಿಗೆ ಜನರನ್ನು ಮರಳು ಮಾಡುವ ಕಲೆ ಗೊತ್ತಿದೆ. ದೇಶ ಪ್ರೇಮ, ಧರ್ಮ ಎಂದೆಲ್ಲಾ ಹೇಳಿ ಯುವ ಸಮೂಹವನ್ನು ದಿಕ್ಕುತಪ್ಪಿಸುತ್ತಿದ್ದಾರೆ. ವಿದೇಶದಲ್ಲಿರುವ ಕಪ್ಪುಹಣ ತರುತ್ತೇನೆಂದು ಹೇಳಿ ಒಂದು ಪೈಸೆಯನ್ನೂ ತರಲಿಲ್ಲ. ಉದ್ಯೋಗ ಸೃಷ್ಟಿಯೂ ಆಗಲಿಲ್ಲ ಎಂದು ಪ್ರಕಾಶ್ ತರಾಟೆಗೆ ತೆಗೆದುಕೊಂಡರು.
ಬಡವರಿಗೆ ಉಚಿತವಾಗಿ ಗ್ಯಾಸ್ ನೀಡುತ್ತೇವೆಂದು ಹೇಳಿ ಮರಳು ಮಾಡಲಾಗುತ್ತಿದೆ. ಬಡವರಿಗೆ ಉಚಿತ ಗ್ಯಾಸ್ ಸಂಪರ್ಕ ಕೊಡುತ್ತಿದ್ದಾರೆ ನಿಜ. ಆದರೆ, ಹಿಂದಿನ ಯುಪಿಎ ಸರಕಾರದಲ್ಲಿ 400 ರೂ.ಗಳಿದ್ದ ಗ್ಯಾಸ್ ದರವನ್ನು ಈಗ 780ಕ್ಕೆ ಏರಿಸಲಾಗಿದೆ. ಮಾರ್ಚ್‍ನಿಂದ ಸಬ್ಸಿಡಿ ರದ್ದುಗೊಳಿಸಲು ಘೋಷಿಸಲಾಗಿದೆ ಎಂದು ಅವರು ಹೇಳಿದರು.
ಗೋರಕ್ಷಣೆ ಹೆಸರಿನಲ್ಲಿ ದಾಳಿ ನಡೆಸಿ ಹಲ್ಲೆ ಮಾಡುವುದು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ತುಚ್ಚೀಕರಿಸುವುದು. ಧರ್ಮದ ಮೂಲಕ ಜನರ ಮನೋಭಾವನೆಯನ್ನು ಕೆರಳಿಸುವುದು ಅಭಿವೃದ್ಧಿಯೇ ಎಂದು ಅವರು ಪ್ರಶ್ನಿಸಿದರು.
ಅಧ್ಯಕ್ಷತೆ ವಹಿಸಿದ್ದ ಪಕ್ಷದ ಮಂಡ್ಯ ವಲಯ ಸಮಿತಿ ಕಾರ್ಯದರ್ಶಿ ಸಿ.ಕುಮಾರಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುಸರಿಸುತ್ತಿರುವ ಜನವಿರೋಧಿ ನೀತಿಗಳು ದೇಶದ ಜನರ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದು ಆಪಾದಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿದರೂ ಪೆಟ್ರೋಲ, ಡೀಸಲ್, ಗ್ಯಾಸ್ ದರ ಮಾತ್ರ ನಮ್ಮ ದೇಶದಲ್ಲಿ ಏರುತ್ತಲೇ ಇದೆ. ರೈತರು, ಕಾರ್ಮಿಕರ ಆತ್ಮಹತ್ಯೆ, ವಲಸೆ ಹೆಚ್ಚಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರವು ಸಹ ಜನವಿರೋಧಿ ಉದಾರೀಕರಣ ನೀತಿಗಳಿಗೆ ಅಂಟಿಕೊಂಡಿದ್ದು, ಕೋಮುವಾದವನ್ನು ಎದುರಿಸಲು ಪ್ರಯತ್ನ ಮಾಡುತ್ತಿಲ್ಲ ಎಂದು ದೂರಿದ ಅವರು, ಎಪ್ರಿಲ್ ತಿಂಗಳಲ್ಲಿ ಹೈದರಾಬಾದ್‍ನಲ್ಲಿ ನಡೆಯಲಿರುವ ಸಿಪಿಎಂನ ಅಖಿಲ ಭಾರತ ಮಹಾಧಿವೇಶನದ ಹಿನ್ನೆಲೆಯಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.
ರಾಜೇಂದ್ರ ಸಿಂಗ್ ಬಾಬು, ಅಬ್ದುಲ್ಲಾ, ನಾರಾಯಣ್, ಶಾಹೀರಾಬಾನು, ಇತರ ಮುಖಂಡರು ಉಪಸ್ಥಿತರಿದ್ದರು.







