ಡಾ.ಹೆಬ್ರಿ ಪ್ರಯೋಗಶಾಲೆ ಸಾಂಸ್ಕೃತಿಕ ಪ್ರಯೋಗಶಾಲೆಯಾಗಿತ್ತು : ಗುಬ್ಬಿಗೂಡು ರಮೇಶ್

ಮಂಡ್ಯ, ಡಿ.2: ವೈದ್ಯ ವೃತ್ತಿ, ಪ್ರಯೋಗಶಾಲೆಯ ಕೆಲಸದ ಜೊತೆಜೊತೆಗೆ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾ ಹಲವಾರು ಯುವ ಪ್ರತಿಭೆಗಳು ಮಂಡ್ಯದಲ್ಲಿ ರೂಪುಗೊಳ್ಳಲು ಕಾರಣಕರ್ತರಾಗಿರುವ ಹೆಬ್ರಿಯವರ ಪ್ರಯೋಗಶಾಲೆ ಸಾಂಸ್ಕೃತಿಕ ಪ್ರಯೋಗಶಾಲೆಯಾಗಿತ್ತು ಎಂದು ಮೈಸೂರಿನ ಗುಬ್ಬಿಗೂಡು ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ಗುಬ್ಬಿಗೂಡು ರಮೇಶ್ ಅಭಿಪ್ರಾಯಪಟ್ಟಿದ್ದಾರೆ.
ಸಂಸ್ಕೃತಿ ಸಂಘಟನೆ, ಅಖಿಲ ಕರ್ನಾಟಕ ಕರಾವಳಿ ಸಾಂಸ್ಕೃತಿಕ ಒಕ್ಕೂಟ, ಪ್ರತಿಭೆ ವೇದಿಕೆ ಮತ್ತು ಡ್ಯಾಫೋಡಿಲ್ಸ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನ ಸಹಯೋಗದಲ್ಲಿ ನಗರದ ಗಾಂಧಿಭವನದಲ್ಲಿ ಶನಿವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಿಯೋಜಿತ ಅಧ್ಯಕ್ಷ ಡಾ.ಪ್ರದೀಪಕುಮಾರ ಹೆಬ್ರಿ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ದೂರದ ಉಡುಪಿ ಜಿಲ್ಲೆಯ ಹೆಬ್ರಿಯಿಂದ ಬಂದು ಮಂಡ್ಯದಲ್ಲಿ ನೆಲೆಸಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ ಅವರು ಬದುಕನ್ನು ಕಟ್ಟಿಕೊಂಡ ರೀತಿ ಅನನ್ಯ. ಹೆಬ್ರಿಯವರ ಪ್ರವೃತ್ತಿಯ ಜೀವನ ಹೂವಿನ ಹಾಸಿಗೆಯೇನೂ ಅಲ್ಲ. ಅವರ ಸಾಹಿತ್ಯ ಸೃಷ್ಟಿಯ ಆರಂಭದ ದಿನಗಳಲ್ಲಿ ಸಾಕಷ್ಟು ಟೀಕೆ ಟಿಪ್ಪಣಿಗಳನ್ನೂ ಸಹ ಎದುರಿಸಿದ್ದಾರೆ. ಅವೆಲ್ಲವನ್ನೂ ಜೀರ್ಣಿಸಿಕೊಂಡು ಬೆಳೆದು ಯಾವುದೇ ರೀತಿಯ ವಶೀಲಿ, ಲಾಬಿಗಳಿಲ್ಲದೇ ಇಂದು ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿಯಂತಹ ದೊಡ್ಡ ಗೌರವ ಪಡೆದಿರುವುದು ಹೆಮ್ಮೆಯ ವಿಷಯ ಎಂದು ಅವರು ಶ್ಲಾಘಿಸಿದರು.
ಬರವಣಿಗೆ ಎಲ್ಲರಿಗೂ ಒಲಿದು ಬರುವುದಿಲ್ಲ. ಹೆಬ್ರಿ ಅವರ ಈ ಸಾಧನೆಯ ಹಿಂದೆ ಅಪಾರ ಶ್ರಮವಿದೆ. ವಿವಿಧ ಪ್ರಕಾರದ ಕೃತಿಗಳ ಜೊತೆಗೆ ಹತ್ತು ಮಹಾಕಾವ್ಯಗಳನ್ನು ರಚಿಸಿದ್ದಾರೆ. ಕುವೆಂಪುರವರ ರಾಮಾಯಣ ದರ್ಶನಂ ಮಹಾಕಾವ್ಯವನ್ನು 48 ಪುಟಗಳಿಗೆ ಇಳಿಸಿ ಮಕ್ಕಳಿಗೂ ಅರ್ಥವಾಗುವಂತೆ ರಚಿಸಿರುವುದು ಅವರ ಪ್ರತಿಭೆಗೆ ಸಾಕ್ಷಿ. ಅಕ್ಕಿ, ಸಕ್ಕರೆಯ ನಾಡು, ವಿವೇಕವಂತರ ನಾಡು ಎನಿಸಿಕೊಂಡ ಮಂಡ್ಯ ಪ್ರದೀಪಕುಮಾರ ಹೆಬ್ರಿಯವರನ್ನು ಆಯ್ಕೆ ಮಾಡುವ ಮೂಲಕ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿಕುಮಾರ ಚಾಮಲಾಪುರ, ಡಾ.ಹೆಬ್ರಿಯವರು ವೃತ್ತಿ ಮತು ್ತ ಪ್ರವೃತ್ತಿಗಳ ನಡುವೆ ತಾವು ಬೆಳೆಯುವುದರ ಜೊತೆಗೆ ಇಲ್ಲಿನ ಯುವ ಸಾಹಿತಿಗಳನ್ನು ಬೆಳಸುವ ಕೆಲಸ ಮಾಡಿರುವುದು ಪ್ರಶಂಸನೀಯ. ಇವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಹಲವು ಪ್ರತಿಭೆಗಳು ಬೆಳಕಿಗೆ ಬಂದಿವೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಇವರು ಸಾಂಸ್ಕೃತಿಕ ಜಗತ್ತಿನಲ್ಲೂ ಸಾಧನೆ ಮಾಡಿದ್ದಾರೆ ಎಂದು ಇಂತಹವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಪರಿಷತ್ತಿಗೂ ಗೌರವ ತಂದುಕೊಡುತ್ತದೆ ಎಂದರು.
ಸಂಸ್ಕೃತಿ ಸಂಘಟನೆ ಅಧ್ಯಕ್ಷ ಕೆ.ಪ್ರಹ್ಲಾದರಾವ್ ಅಧ್ಯಕ್ಷತೆ ವಹಿಸಿದ್ದರು. ಡ್ಯಾಫೋಡಿಲ್ಸ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಸುಜಾತ ಕೃಷ್ಣ, ಪ್ರತಿಭೆ ವೇದಿಕೆಯ ಅಧ್ಯಕ್ಷ ಎಸ್. ರಾಜರತ್ನಂ, ಕರಾವಳಿ ಸಾಂಸ್ಕøತಿಕ ಒಕ್ಕೂಟದ ಅಧ್ಯಕ್ಷ ಜಗನ್ನಾಥ ಎಸ್. ಶೆಟ್ಟಿ, ಶ್ರೀನಿವಾಸಶೆಟ್ಟಿ, ಉಮಾ, ಹೊಳಲು ಶ್ರೀಧರ್, ಎಂವಿ.ಧರಣೇಂದ್ರಯ್ಯ ಉಪಸ್ಥಿತರಿದ್ದರು.







