ಹೊಸ ಕರೆನ್ಸಿ ನೋಟುಗಳಲ್ಲಿ 'ಗುರುತಿಸುವಿಕೆ ಸಮಸ್ಯೆ': ಕೇಂದ್ರ ಸರಕಾರ, ಆರ್ ಬಿಐಗೆ ಹೈಕೋರ್ಟ್ ನೋಟಿಸ್

ಹೊಸದಿಲ್ಲಿ, ಡಿ.2: ಹೊಸದಾಗಿ ಚಲಾವಣೆಗೆ ತಂದಿರುವ ಕರೆನ್ಸಿ ನೋಟುಗಳು ಹಾಗೂ ನಾಣ್ಯಗಳನ್ನು ದೃಷ್ಟಿ ದೋಷ ಇರುವವರು ಗುರುತಿಸಲು ಕಷ್ಟವಾಗಿದ್ದು ಇವನ್ನು ಬದಲಾಯಿಸಬೇಕು ಎಂಬ ಅರ್ಜಿಯನ್ನು ಪರಿಶೀಲಿಸಿದ ದಿಲ್ಲಿ ಹೈಕೋರ್ಟ್, ಈ ಬಗ್ಗೆ ಕೇಂದ್ರ ಸರಕಾರ ಮತ್ತು ಆರ್‌ಬಿಐಗೆ ನೋಟಿಸ್ ಜಾರಿಗೊಳಿಸಿದೆ. ಇದೊಂದು ಸಾರ್ವಜನಿಕ ಹಿತಾಸಕ್ತಿ ಅಡಕಗೊಂಡಿರುವ ಮಹತ್ವದ ವಿಷಯವಾಗಿದ್ದು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ದೃಷ್ಟಿ ದೋಷ ಉಳ್ಳ ಹಲವಾರು ಮಂದಿಗೆ ಈ ಹೊಸ ನೋಟುಗಳಿಂದ ಸಮಸ್ಯೆ ಎದುರಾಗಿದೆ. ಅಲ್ಲದೆ ನೋಟುಗಳ ಗಾತ್ರ ಬದಲಾವಣೆಯಿಂದ ಇನ್ನಷ್ಟು ಸಮಸ್ಯೆಯಾಗಿದೆ ಎಂಬ ದೂರು ವ್ಯಕ್ತವಾಗಿದೆ ಎಂದು ಪ್ರಭಾರ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ನ್ಯಾಯಮೂರ್ತಿ ಸಿ.ಹರಿಶಂಕರ್ ಅವರನ್ನೊಳಗೊಂಡಿರುವ ನ್ಯಾಯಪೀಠ ತಿಳಿಸಿದೆ.
ಹೊಸ ಕರೆನ್ಸಿ ನೋಟುಗಳಲ್ಲಿ ಬದಲಾವಣೆ ತಂದು, ಇವನ್ನು ದೃಷ್ಟಿದೋಷ ಉಳ್ಳವರೂ ಸುಲಭವಾಗಿ ಗುರುತಿಸುವಂತಾಗಲು ಕ್ರಮ ಕೈಗೊಳ್ಳುವಂತೆ ನ್ಯಾಯಪೀಠವು ಆರ್‌ಬಿಐ ಮತ್ತು ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿ.6ಕ್ಕೆ ನಿಗದಿಗೊಳಿಸಿತು.
ಈ ಅರ್ಜಿಯನ್ನು ಮನವಿ ಎಂದು ಪರಿಗಣಿಸಿ ವಿಲೇವಾರಿ ಮಾಡುವಂತೆ ಕೇಂದ್ರ ಸರಕಾರ ಮತ್ತು ಆರ್‌ಬಿಐಯನ್ನು ಪ್ರತಿನಿಧಿಸಿದ ವಕೀಲ ಸಂಜೀವ್ ನರೂಲ ನ್ಯಾಯಾಲಯವನ್ನು ಕೋರಿದರು. ಆದರೆ ಇದನ್ನು ತಳ್ಳಿಹಾಕಿದ ನ್ಯಾಯಾಲಯ, ಈ ಹಂತದಲ್ಲಿ ಅರ್ಜಿಯನ್ನು ತಳ್ಳಿಹಾಕಲಾಗದು. ಸರಕಾರ ಮತ್ತು ಆರ್‌ಬಿಐ ಈ ಬಗ್ಗೆ ಗಮನ ಹರಿಸಲೇಬೇಕು ಎಂದು ಸ್ಪಷ್ಟವಾಗಿ ತಿಳಿಸಿತು.
ದೃಷ್ಟಿ ದೋಷ ಇರುವ ವ್ಯಕ್ತಿಗಳಿಗೆ 2,000ರೂ, 500 ರೂ. ಮತ್ತು 50 ರೂ.ಗಳ ಹೊಸ ಕರೆನ್ಸಿ ನೋಟುಗಳನ್ನು ಗುರುತಿಸಲು ಮತ್ತು ಈ ನೋಟುಗಳನ್ನು ಬಳಸಿ ವ್ಯವಹರಿಸಲು ಕಷ್ಟವಾಗುತ್ತಿದೆ. ಹೊಸ ಮತ್ತು ಹಳೆಯ ನೋಟುಗಳ ಗಾತ್ರದಲ್ಲೂ ವ್ಯತ್ಯಾಸವಿದೆ. ಅಲ್ಲದೆ 10 ರೂ, 5 ರೂ, 2 ರೂ. ಮತ್ತು 1 ರೂ. ನಾಣ್ಯವನ್ನು ಗುರುತಿಸಲೇ ಕಷ್ಟವಾಗುತ್ತಿದೆ. ದೃಷ್ಟಿದೋಷ ಇರುವ ವ್ಯಕ್ತಿಗಳಿಗೆ ಈ ನೋಟುಗಳನ್ನು ಬಳಸಿ ಸ್ವತಂತ್ರವಾಗಿ ವ್ಯವಹಾರ ನಡೆಸಲು ಸಾಧ್ಯವೇ ಇಲ್ಲದಂತಾಗಿದೆ. ಆದ್ದರಿಂದ ಇವನ್ನು ಬದಲಾಯಿಸಲು ಸರಕಾರ ಮತ್ತು ಆರ್‌ಬಿಐಗೆ ಸೂಚಿಸಬೇಕೆಂದು ಕೋರಿ ಎನ್‌ಜಿಒ ಸಂಸ್ಥೆಯೊಂದು ಅರ್ಜಿ ಸಲ್ಲಿಸಿತ್ತು.







