ನೀವು ಪ್ರಧಾನಿಯಾಗುತ್ತೀರಾ ಎಂದು ಕೇಳಿದ್ದಕ್ಕೆ ಉತ್ತರಪ್ರದೇಶದ ಸಿಎಂ ಆದಿತ್ಯನಾಥ್ ಅವರ ಪ್ರತಿಕ್ರಿಯೆ ಇದು

ಹೊಸದಿಲ್ಲಿ,ಡಿ.2: ಉತ್ತರಪ್ರದೇಶಗಳಲ್ಲಿ ನಗರಾಡಳಿತ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿಯ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಮುಂಬರುವ ವರ್ಷಗಳಲ್ಲಿ ರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಪಾತ್ರವನ್ನು ನೀಡಲು ಪಕ್ಷ ನಾಯಕತ್ವ ಒಲವಿದೆ ಎಂಬ ವದಂತಿಗಳು ಕೇಳಿಬರತೊಡಗಿದೆ. ಈ ಮಧ್ಯೆ ಭವಿಷ್ಯದಲ್ಲಿ ತಾನೋರ್ವ ಪ್ರಧಾನಿ ಹುದ್ದೆಯ ಆಕಾಂಕ್ಷಿಯೇ ಎಂದು ಟಿವಿ ವಾಹಿನಿಯೊಂದರ ಪ್ರಶ್ನೆಗೆ ಆದಿತ್ಯನಾಥ್, ಸ್ಪಷ್ಟವಾಗಿ ಉತ್ತರಿಸದೆ ನುಣುಚಿಕೊಂಡಿದ್ದಾರೆ. ಪ್ರಧಾನಿ ಮೋದಿ 2015ರಲ್ಲಿ ಸಂಸತ್‌ನಲ್ಲಿ ಉಲ್ಲೇಖಿಸಿದ ಭಗವದ್ಗೀತೆಯ ಶ್ಲೋಕವನ್ನೇ ಆದಿತ್ಯನಾಥ್ ಪುನರುಚ್ಚರಿಸಿದ್ದಾರೆ.
‘‘ನ ತ್ವಹಂ ಕಾಮಾಯೆ ರಾಜ್ಯಂ, ನ ಸ್ವರ್ಗಂ ನಾ-ಅಪುನಾರ್ಭವಮ್. ಕಾಮಾಯೆ ದುಃಖ ತಪ್ತನಾಮ್ ಪ್ರಣೀನಾಮರ್ತಿ ನಾಶನಂ’’ (ಓ ಭಗವಂತ,ನನಗೆ ಯಾವುದೇ ಸಾಮ್ರಾಜ್ಯ ಬೇಕಾಗಿಲ್ಲ. ಸ್ವರ್ಗದ ಸುಖ ಅಥವಾ ಪುನರ್ಜನ್ಮದಿಂದ ಮುಕ್ತಿಯೂ ಬೇಕಾಗಿಲ್ಲ. ಆದರೆ ನಾನು ಎಲ್ಲಾ ಜೀವಿಗಳು ಬದುಕಿನ ಬವಣೆಗಳಿಂದ ಮುಕ್ತರಾಗುವುದನ್ನು ಬಯಸುತ್ತಿದ್ದೇನೆ’’ ಎಂಬ ಭಗವದ್ಗೀತೆಯ ಶ್ಲೋಕವನ್ನು ಮೋದಿ ಸದನದಲ್ಲಿ ಜಪಿಸಿದ್ದರು. ಆಗ ಆದಿತ್ಯನಾಥ್, ಗೋರಖ್‌ಪುರ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದರು.
ಇಂದು ಅಜ್‌ತಕ್ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಆದಿತ್ಯನಾಥ್ ಅವರನ್ನು ತಾವು ಪ್ರಧಾನಿ ಹುದ್ದೆಯೇ ಆಕಾಂಕ್ಷಿಯೇ ಎಂದು ಪ್ರಶ್ನಿಸಿದಾಗ ಈ ಶ್ಲೋಕವನ್ನು ಪುನರುಚ್ಚರಿಸಿದ ಅವರು, ಇದರ ಹೊರತಾಗಿ ತನಗೆ ಬೇರೆ ಯಾವುದೇ ಮಹತ್ವಾಕಾಂಕ್ಷೆಗಳಿಲ್ಲವೆಂದು ಹೇಳಿದರು. ಮುಂದುವರಿದು ಮಾತನಾಡಿದ ಅವರು ಉತ್ತರಪ್ರದೇಶ ಪೌರಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ 5 ಕೋಟಿಗೂ ಅಧಿಕ ಮಂದಿ ಪ್ರಧಾನಿ ಬಗ್ಗೆ ತಮ್ಮ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ಆರ್ಥಿಕ ಸುಧಾರಣೆಗಳಿಗೆ ನೀಡಿದ ತೀರ್ಪು ಇದಾಗಿದೆಯೆಂದರು.
ಪೌರಾಡಳಿತ ಚುನಾವಣೆಯಲ್ಲಿ ಮತಯಂತ್ರ (ಇವಿಎಂ)ಗಳನ್ನು ತಿರುಚಲಾಗಿದೆಯೆಂಬ ಆರೋಪವನ್ನು ಅವರು ನಿರಾಕರಿಸಿದ್ದಾರೆ. ಇಂತಹ ಅಕ್ರಮಗಳಿಂದ ಲಾಭ ಪಡೆದಿದ್ದವರೇ, ಈಗ ಇವಿಎಂ ತಿರುಚಿದ್ದಾರೆಂಬ ಆರೋಪವನ್ನು ಹೊರಿಸುತ್ತಿದ್ದಾರೆ ಎಂದರು.
"ನಮ್ಮ ಗೆಲುವಿಗೆ ಇವಿಎಂನ್ನು ದೂರಿದ ಎಸ್ಪಿ ನಾಯಕ ನರೇಶ್ ಅಗರ್‌ವಾಲ್‌ರಲ್ಲಿ ಒಂದು ಪ್ರಶ್ನೆ ಕೇಳಬಯಸುತ್ತೇನೆ. ಅವರ ಪುತ್ರ ನಿತಿನ್ ಕೂಡಾ ಇವಿಎಂನ ಲೋಪದಿಂದಾಗಿ ಜಯಗಳಿಸಿದ್ದಾರೆಯೇ?. ಒಂದು ವೇಳೆ ಅದು ಹೌದಾದಲ್ಲಿ, ಕೂಡಲೇ ರಾಜೀನಾಮೆ ನೀಡಿ, ಹೊಸತಾಗಿ ಚುನಾವಣೆಗೆ ತೆರಳಲಿ ಎಂದು ಅವರು ತನ್ನ ಪುತ್ರನಿಗೆ ಸೂಚಿಸಲಿ" ಎಂದು ಆದಿತ್ಯನಾಥ್ ಹೇಳಿದ್ದಾರೆ.







